ಕೋಲಾರ: ‘ಹಾಲು ಒಕ್ಕೂಟವೇನು ರಿಯಲ್ ಎಸ್ಟೇಟ್ ಸಂಸ್ಥೆಯೇ? ಜಮೀನು ಮಾರಾಟ ಮಾಡಿ ಮಧ್ಯದಲ್ಲಿ ಸರ್ಕಾರಿ ಜಮೀನುಗಳನ್ನು ಯಾಮಾರಿಸಿ ಲೇಔಟ್‌ಗೆ ಸೇರಿಸಿಕೊಂಡು ದುಡ್ಡು ಮಾಡುವ ವಹಿವಾಟೇ’ ಎಂದು ಕೋಮುಲ್ ನೂತನ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ, ಸ್ವಪಕ್ಷೀಯ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ಒಕ್ಕೂಟದ ಮುಖ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಸ್.ಎನ್.ನಾರಾಯಣಸ್ವಾಮಿ ಪದೇದೇ ನನ್ನ ವಿರುದ್ಧ ಮಾತನಾಡುತ್ತಾರೆ. ಎದ್ದರೆ, ಕುಳಿತರೆ ಅವರ ಕಣ್ಣಿಗೆ ನಂಜೇಗೌಡನೇ ಕಾಣಿಸುತ್ತಾನೆ. ಕೋಚಿಮುಲ್‌ನಲ್ಲಿ ನೂರಾರು ಕೋಟಿ ಹಗರಣ ನಡೆದಿದೆ ಎನ್ನುತ್ತಿದ್ದಾರೆ. ಈಗ ಅವರೇ ನಿರ್ದೇಶಕರಾಗಿ ಬಂದಿದ್ದಾರೆ. ನಮ್ಮ ಯೋಜನೆ ಇರುವುದೇ ₹300 ಕೋಟಿ. ಅವರು ನೂರಾರು ಕೋಟಿ ಅವ್ಯವಹಾರ ಎನ್ನುತ್ತಿದ್ದಾರೆ. ಒಕ್ಕೂಟದ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಸೋಲಾರ್ ಘಟಕ ಇಡೀ ದೇಶದ ಡೇರಿಗಳಿಗೆ ಮಾದರಿಯಾಗಿದೆ’ ಎಂದರು.
‘ಮೂರು ಬಾರಿ ಶಾಸಕರಾಗಿರುವ ಅವರು ಹಿರಿಯರು ಎಂದು ನಾನು ಹೇಳಿದ್ದೇನೆ. ಅವರನ್ನು ಹೀಯಾಳಿಸಲು ಹೇಳಿಲ್ಲ. ನಾರಾಯಣಸ್ವಾಮಿ ಕುರಿತು ಇನ್ನು ಮಾತನಾಡಬಾರದೆಂದು ನಾನು ನಿರ್ಧರಿಸಿದ್ದೇನೆ. ಇವತ್ತಿಗೆ ಕೊನೆ. ಅವರು ಬೇಕಾದರೆ ಮಾತನಾಡಿಕೊಂಡಿರಲಿ. ಅವರು ಎಷ್ಟು ಮಾತನಾಡಿದರೂ ಅಷ್ಟು ನನಗೆ ವರ. ಅವರು ನಮ್ಮ ಪಕ್ಷದವರೇ; ಬೇರೆ ಪಕ್ಷದವರಾಗಿದ್ದರೆ ನೋಡಿಕೊಳ್ಳುತ್ತಿದ್ದೆ. ಜೀವನಪೂರ್ತಿ ಗೆರೆ ಹಾಕಿಕೊಂಡೇ ಬಂದಿದ್ದೇನೆ’ ಎಂದು ಹೇಳಿದರು.
‘ಕೋಮುಲ್ ಅಧಿಕಾರಿಗಳು, ಸೆಕ್ಷನ್ ಅಧಿಕಾರಿಗಳು, ತಾಲ್ಲೂಕುವಾರು ಡಿಎಂ, ಸೂಪರ್‌ವೈಸರ್ ಸಭೆ ನಡೆಸಿ ಹಲವಾರು ವಿಚಾರ ಚರ್ಚಿಸಿದ್ದೇನೆ. ಮುಂದೆ ಆಡಳಿತ ಮಂಡಳಿ ಸಭೆ ಕರೆಯಬೇಕು. ಹೊಸ ಹೊಸ ಕಾರ್ಯಕ್ರಮ ಮಾಡಬೇಕಿದೆ. ನಮ್ಮ ಗುರಿ ವರ್ಷದೊಳಗೆ 10 ಲಕ್ಷ ಲೀಟರ್ ಹಾಲು ಉತ್ಪಾದಿಸಬೇಕು. ಅದಕ್ಕಾಗಿ ಹಾಲು ಉತ್ಪಾದಕರನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ 1,600ಕ್ಕೂ ಅಧಿಕ ಹಳ್ಳಿಗಳಿದ್ದು, 900ಕ್ಕೂ ಅಧಿಕ ಸಂಘಗಳಿವೆ. ಕೆಲ ಹಳ್ಳಿಗಳಲ್ಲಿ ಇನ್ನೂ ಸಂಘಗಳಿಲ್ಲ. ಎಲ್ಲೆಲ್ಲಿ ಹಾಲು ಉತ್ಪಾದನೆ ಆಗುತ್ತದೆಯೋ ಅಲ್ಲಿ ಸಂಘ ರಚಿಸಲಾಗುವುದು’ ಎಂದರು.
ಪ್ರತಿ ಸಂಘದಲ್ಲೂ ಕಾಮನ್ ಸಾಫ್ಟ್‌ವೇರ್ ಅಳವಡಿಸಬೇಕು. ಫ್ಯಾಟ್ ಮೇಲೆ ಹಾಲು ಉತ್ಪಾದಕರಿಗೆ ದರ ಕೊಡಬೇಕು. ಕಾಮನ್ ಸಾಫ್ಟ್‌ವೇರ್ ಅಳವಡಿಕೆಯಿಂದ ಗುಣಮಟ್ಟದ ಹಾಲು ನೀಡುವವರಿಗೆ ಹೆಚ್ಚು ಹಣ ಸಿಗುತ್ತದೆ. ಈ ಸಾಫ್ಟ್‌ವೇರ್ ಅಳವಡಿಕೆ ಸಂಬಂಧ ಎನ್‌ಡಿಡಿಬಿ ಜೊತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಚರ್ಚೆ ನಡೆಸಿದ್ದಾರೆ. ಎಲ್ಲಾ ಸಂಘಗಳಿಗೆ ಈ ಸಾಫ್ಟ್‌ವೇರ್ ಅಳವಡಿಸಲಾಗುವುದು ಎಂದು ಹೇಳಿದರು.
ಹಾಲು ಉತ್ಪಾದಕರಿಗೆ ಹೆಚ್ಚಿನ ದರ ಕೊಡಲು ಏನು ಮಾಡಬೇಕೆಂಬ ಚರ್ಚೆ ನಡೆದಿದೆ. ಮನಸ್ಸಿಗೆ ಬಂದಂತೆ ತೀರ್ಮಾನ ಮಾಡಲು ಆಗದು. ಮುಂದೆ ನೋಡುತ್ತೇವೆ.ಕೆ.ವೈ.ನಂಜೇಗೌಡ, ಶಾಸಕ
ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು. ವರ್ಷಕ್ಕೆ ಎರಡು ಬಾರಿ ವಿಮೆ ಹಣ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಶೇ 60ರಷ್ಟು ಮಂದಿ ಮಾತ್ರ ತಮ್ಮ ರಾಸುಗಳಿಗೆ ವಿಮೆ ಮಾಡಿಸಿದ್ದಾರೆ. ಉಳಿದವರು ಕಡ್ಡಾಯವಾಗಿ ಮಾಡಿಸಬೇಕು ಎಂದರು.
‘ಬೈರತಿ ವಿರುದ್ಧ ಸಿಎಂಗೆ ಎಸ್‌ಎನ್‌ಎನ್ ದೂರು’
‘ಎಸ್.ಎನ್.ನಾರಾಯಣಸ್ವಾಮಿ ಪದೇಪದೇ ತಾನು ದಲಿತ ಎನ್ನುತ್ತಿದ್ದು ಮೂರು ಬಾರಿ ಶಾಸಕರಾಗಿರುವ ಅವರಿಗೆ ಎಲ್ಲಾ ಸಮುದಾಯದವರು ವೋಟು ಹಾಕಿದ್ದಾರೆ. ಈಗ ನೋಡಿದರೆ ಒಕ್ಕಲಿಗರು ದೇವರು ಎಂದಿದ್ದಾರೆ. ಆದರೆ ಉಸ್ತುವಾರಿ ಸಚಿವ ಬೈರತಿ ಸುರೇಶ್ ಒಕ್ಕಲಿಗರಿಗೆ ಬೆಂಬಲ ನೀಡುತ್ತಿದ್ದಾರೆ ಉಸ್ತುವಾರಿ ಸರಿ ಇಲ್ಲ ಎಂಬುದಾಗಿ ಮುಖ್ಯಮಂತ್ರಿಗೆ ದೂರು ನೀಡುತ್ತಾರೆ. ಒಕ್ಕಲಿಗರು ಬದುಕಬಾರದೇ’ ಎಂದು ಕೆ.ವೈ.ನಂಜೇಗೌಡ ಪ್ರಶ್ನಿಸಿದರು.
‘ನಾನು ಒಕ್ಕಲಿಗ ನಿಜ. ಆದರೆ ಮಾಲೂರು ಕ್ಷೇತ್ರದಲ್ಲಿ ದಲಿತರು ಕುರುಬರು ಮುಸ್ಲಿಮರು ಸೇರಿ ಎಲ್ಲಾ ಜಾತಿಯವರು ನನ್ನನ್ನು 1986ರಿಂದ ಉಳಿಸಿಕೊಂಡು ಬಂದಿದ್ದಾರೆ. ಕ್ಷೇತ್ರದಲ್ಲಿ 50 ಸಾವಿರ ಒಕ್ಕಲಿಗರು ಇದ್ದಾರೆ. ಆದರೆ ನಾನು ಒಕ್ಕಲಿಗರ ಲೀಡರ್ ಎಂದು ಎಲ್ಲೂ ಹೇಳಿಕೊಂಡಿಲ್ಲ’ ಎಂದರು.
‘ನಾರಾಯಣಸ್ವಾಮಿ ಬಿಪಿಎಲ್ ಅಲ್ಲ; ಎಪಿಎಲ್’
‘ಎಸ್.ಎನ್.ನಾರಾಯಣಸ್ವಾಮಿ ದಲಿತರು ಎನ್ನುವುದು ಗೊತ್ತು ಮೀಸಲು ವಿಧಾನಸಭೆ ಕ್ಷೇತ್ರದ ಶಾಸಕ ಎನ್ನುವುದು ಗೊತ್ತು. ಅವರು ಬಿಪಿಎಲ್ ಅಲ್ಲ; ಎಪಿಎಲ್. ಆದರೆ ಪದೇಪದೇ ಬಿಪಿಎಲ್ ಎನ್ನುತ್ತಾರೆ. ಎಷ್ಟು ಕೋಟಿ ತೆರಿಗೆ ಪಾವತಿಸುತ್ತಾರೆ? ಎಷ್ಟೊ ದಲಿತರು ಬಡವರು ಅಲೆಯುತ್ತಿದ್ದಾರೆ. ಏಕೆ ಇವರು ಈ ರೀತಿ ಮಾತನಾಡುತ್ತಾರೆ’ ಎಂದು ಕೆ.ವೈ.ನಂಜೇಗೌಡ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.