ADVERTISEMENT

ಹಸು ಖರೀದಿ ಸಾಲ ವಿತರಣೆಯಲ್ಲಿ ಅಕ್ರಮ: ನಂಜುಂಡಪ್ಪ– ಗೋವಿಂದಗೌಡ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 19:30 IST
Last Updated 22 ಫೆಬ್ರುವರಿ 2020, 19:30 IST
ಹಸು ಸಾಲದ ವಿಚಾರವಾಗಿ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌.ನಂಜುಂಡಪ್ಪ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶನಿವಾರ ಮುಖಾಮುಖಿ ಚರ್ಚೆ ನಡೆಸಿದರು.
ಹಸು ಸಾಲದ ವಿಚಾರವಾಗಿ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌.ನಂಜುಂಡಪ್ಪ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶನಿವಾರ ಮುಖಾಮುಖಿ ಚರ್ಚೆ ನಡೆಸಿದರು.   

ಕೋಲಾರ: ಹಸು ಖರೀದಿ ಸಾಲದ ವಿಚಾರವಾಗಿ ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌.ನಂಜುಂಡಪ್ಪ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಅವರು ಇಲ್ಲಿ ಶನಿವಾರ ಮುಖಾಮುಖಿ ಚರ್ಚೆ ನಡೆಸಿದರು.

ಪರಸ್ಪರರು ಕಳೆದೊಂದು ವಾರದಿಂದ ಪತ್ರಿಕಾ ಹೇಳಿಕೆ ನೀಡುತ್ತಾ ಆರೋಪ ಪ್ರತ್ಯಾರೋಪ ಮಾಡುತ್ತಾ ಚರ್ಚೆಗೆ ಗ್ರಾಸವಾಗಿದ್ದರು. ಹಸು ಖರೀದಿಗೆ ಡಿಸಿಸಿ ಬ್ಯಾಂಕ್‌ನ ಸಾಲ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದ ನಂಜುಂಡಪ್ಪ ದಾಖಲೆಪತ್ರ ಸಮೇತ ಅಕ್ರಮ ಬಹಿರಂಗಪಡಿಸುವುದಾಗಿ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡರು ಅಕ್ರಮ ಆರೋಪದ ಸಂಬಂಧ ಬಹಿರಂಗ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ದರು. ಈ ಸವಾಲು ಸ್ವೀಕರಿಸಿ ನಂಜುಂಡಪ್ಪ ಅವರು ಶನಿವಾರ ಡಿಸಿಸಿ ಬ್ಯಾಂಕ್‌ಗೆ ಬಂದು ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದರು.

ADVERTISEMENT

‘ನಾನು ಸುಗಟೂರು ಜಿ.ಪಂ ಕ್ಷೇತ್ರದ ಸದಸ್ಯನಾಗಿದ್ದೇನೆ. ಆದರೆ, ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಡಿಸಿಸಿ ಬ್ಯಾಂಕ್‌ನ ಯಾವುದೇ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುತ್ತಿಲ್ಲ. ವೇದಿಕೆ ಮೇಲೆ ಕೇವಲ ಕಾಂಗ್ರೆಸ್ ನಾಯಕರು ಮಾತ್ರ ಇರುತ್ತಾರೆ’ ಎಂದು ನಂಜುಂಡಪ್ಪ ಕಿಡಿಕಾರಿದರು.

‘ಸುಗಟೂರು ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದಿಂದ ವಿವಿಧೆಡೆ ಸಾಲ ನೀಡಲಾಗಿದೆ. ನಾನು ಶಿಫಾರಸ್ಸು ಮಾಡಿದ ವ್ಯಕ್ತಿಗೆ ಸಾಲ ಕೊಟ್ಟಿಲ್ಲ. ಸೊಸೈಟಿ ಹಂತದಲ್ಲಿ ಬಹಳ ರಾಜಕೀಯ ನಡೆಯುತ್ತಿದೆ. ನಾನು ರಾಜಕೀಯ ದುರುದ್ದೇಶಕ್ಕೆ ಡಿಸಿಸಿ ಬ್ಯಾಂಕ್‌ ವಿರುದ್ಧ ಆರೋಪ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಹಸು ಖರೀದಿಗೆ ಡಿಸಿಸಿ ಬ್ಯಾಂಕ್‌ನಿಂದ ನೀಡಿದ ಸಾಲ ದುರ್ಬಳಕೆಯಾಗಿದೆ. ಫಲಾನುಭವಿಗಳು ಸಾಲವನ್ನು ಬೇರೆ ಉದ್ದೇಶಕ್ಕೆ ಬಳಸಿದ್ದಾರೆ. ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿದಿದೆ. ಕೆಲವೆಡೆ ಅನರ್ಹರಿಗೆ ಸಾಲ ನೀಡಲಾಗಿದೆ. ಈ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದಗೌಡ, ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸುಮಾರು 3.50 ಲಕ್ಷ ಮಹಿಳೆಯರಿಗೆ ಸಾಲ ನೀಡಿದ್ದೇವೆ. ಯಾವುದೇ ಜಾತಿ, ಪಕ್ಷ ಪರಿಗಣಿಸಿ ಸಾಲ ಕೊಟ್ಟಿಲ್ಲ. ಕೇವಲ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಸಾಲ ನೀಡಿದ್ದೇವೆಯೇ?’ ಎಂದು ಪ್ರಶ್ನಿಸಿದರು.

‘6 ವರ್ಷಗಳಿಂದ ವೈಯಕ್ತಿಕ ಕೆಲಸ ಬದಿಗಿಟ್ಟು, ಬ್ಯಾಂಕ್‌ನ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿದ್ದೇನೆ. ಏಕಾಏಕಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರೆ ಹೇಗೆ? ನೀವು ಆರೋಪ ಮಾಡಿರುವಂತೆ ಒಂದೇ ಒಂದು ಅಕ್ರಮದ ಪ್ರಕರಣ ಸಾಬೀತುಪಡಿಸಿ, ನಾನು ಅಧ್ಯಕ್ಷ ಸ್ಥಾನದಲ್ಲಿ ಒಂದು ಕ್ಷಣ ಇರುವುದಿಲ್ಲ. ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ’ ಎಂದು ತಿರುಗೇಟು ನೀಡಿದರು.

ರಾಜಕೀಯ ಮುಖ್ಯವಲ್ಲ: ‘ನನಗೆ ರಾಜಕೀಯ ಮುಖ್ಯವಲ್ಲ. ನಾವು ತಮ್ಮ ಜತೆಯಲ್ಲಿದ್ದೇವೆ. ಹಸು ಖರೀದಿಗೆ ಸಾಲ ನೀಡಿಕೆ ವಿಚಾರವಾಗಿ ಅವ್ಯವಹಾರದ ಆರೋಪ ಮಾಡಿದ್ದೀರಿ. ಜನರಿಗೆ ಸಾಲ ಕೊಡುವುದು ನಮ್ಮಜವಾಬ್ದಾರಿ. ಉಳಿದ ವಿಚಾರ ಜನರಿಗೆ ಬಿಟ್ಟದ್ದು’ ಎಂದು ಗೋವಿಂದಗೌಡ ಹೇಳಿದರು.

‘ಸುಗಟೂರು ಕ್ಷೇತ್ರದ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ. ಅದು ಸಂಪೂರ್ಣ ಕಾಂಗ್ರೆಸ್ ಸಭೆಯಂತಿರುತ್ತದೆ ಎಂದು ಹೇಳಿದ್ದೀರಿ. ಸಾಲ ವಿತರಣೆ ಕಾರ್ಯಕ್ರಮ ಆಯೋಜಿಸುವುದು ಸೊಸೈಟಿಗಳಿಗೆ ಸಂಬಂಧಿಸಿದ ವಿಚಾರ. ಎಲ್ಲಿಯೇ ಕಾರ್ಯಕ್ರಮ ನಡೆದರೂ ಆ ಭಾಗದ ಜನಪ್ರತಿನಿಧಿಗಳನ್ನು ಆಹ್ವಾನಿಸುವಂತೆ ಸೊಸೈಟಿಯವರಿಗೆ ಹೇಳುತ್ತೇವೆ. ಆದರೆ, ಅವರು ಕರೆದಿಲ್ಲ ಎಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಬೇಡಿ’ ಎಂದು ಮನವಿ ಮಾಡಿದರು.

ಸಂಚು ನಡೆದಿದೆ: ಇದಕ್ಕೆ ಸಿಡಿಮಿಡಿಗೊಂಡ ನಂಜುಂಡಪ್ಪ, ‘ನನ್ನನ್ನು ರಾಜಕೀಯವಾಗಿ ಮುಗಿಸುವ ಸಂಚು ನಡೆದಿದೆ. ಈ ಕಾರಣಕ್ಕಾಗಿಯೇ ನನ್ನನ್ನು ಡಿಸಿಸಿ ಬ್ಯಾಂಕ್‌ನ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿಲ್ಲ. ಸಾಲ ವಿತರಣೆ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‌ ಮುಖಂಡರೇ ತುಂಬಿರುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಗೋವಿಂದಗೌಡರು, ‘ಸುಗಟೂರು ಸೊಸೈಟಿ ಅಧ್ಯಕ್ಷರ ಪತ್ನಿ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿದ್ದಾರೆ. ಅಧ್ಯಕ್ಷರು ಬಂದ ಕೂಡಲೇ ಸೊಸೈಟಿಯಲ್ಲೇ ಈ ಬಗ್ಗೆ ಚರ್ಚಿಸೋಣ’ ಎಂದು ಸಮಾಧಾನಪಡಿಸಿದರು. ನಂತರ ನಂಜುಂಡಪ್ಪ ಅವರು ಇದಕ್ಕೆ ಒಪ್ಪಿ ಬ್ಯಾಂಕ್‌ನಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.