ಕೋಲಾರ: ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ತಕ್ಷಣ ಇತ್ಯರ್ಥಪಡಿಸುವ ಸಲುವಾಗಿ ಇಡೀ ಜಿಲ್ಲೆಗೆ ಸಂಬಂಧಿಸಿದಂತೆ ಡಿ.13 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನಟೇಶ್ ಆರ್. ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಷ್ಟ್ರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ಅದಾಲತ್ ನಡೆಸಲಾಗುತ್ತಿದೆ. ಇದರ ಪ್ರಯೋಜವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಮಧ್ಯಸ್ಥಿಕೆ ವಿಶೇಷ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಅದನ್ನು ನ.14ವರೆಗೆ ವಿಸ್ತರಿಸಲಾಗುತ್ತಿದೆ’ ಎಂದರು.
ಪ್ರತೀ ವರ್ಷ ನಾಲ್ಕು ಬಾರಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಈಗ ನಡೆಯುತ್ತಿರುವ ನಾಲ್ಕನೆಯದ್ದು. ಮೊದಲನೇ ಲೋಕ ಅದಾಲತ್ ಮಾರ್ಚ್ 8 ರಂದು, ಎರಡನೇ ಲೋಕ ಅದಾಲತ್ ಜುಲೈ 12 ರಂದು ಹಾಗೂ ಮೂರನೇ ಅದಾಲತ್ ಸೆ.13ರಂದು ನಡೆದಿದ್ದವು ಎಂದು ಹೇಳಿದರು.
ಉಭಯ ಕಕ್ಷಿದಾರರ ಪರಸ್ಪರ ಹೊಂದಾಣಿಕೆಗಾಗಿ ಮತ್ತು ತ್ವರಿತ ನ್ಯಾಯಕ್ಕಾಗಿ ಲೋಕ ಅದಾಲತ್ ಸಹಕಾರಿ. ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಆಯಾಯ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಲಾಗುವುದು. ಮೋಟಾರು ವಾಹನ ಅಪಘಾತ, ಜೀವನಾಂಶ, ಆಸ್ತಿ ವಿಭಾಗದ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳನ್ನು ಈ ಅದಾಲತ್‍ನಲ್ಲಿ ವಿಲೇವಾರಿ ಮಾಡಬಹುದು ಎಂದರು.
ಲೋಕ ಅದಾಲತ್‍ನಲ್ಲಿ ನುರಿತ ವಕೀಲರು ಸಂಧಾನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಸಮಯವೂ ಉಳಿತಾಯವಾಗಲಿದ್ದು, ಕಕ್ಷಿದಾರರು ಅವರ ತೀರ್ಪನ್ನು ಅವರೇ ಪಡೆದುಕೊಳ್ಳಬಹುದು. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಉಭಯಕಡೆಯ ಕಕ್ಷಿದಾರರ ನಡುವೆ ಬಾಂಧವ್ಯವೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕಕ್ಷಿದಾರರು ಈ ಅದಾಲತ್‍ನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ ಮಧ್ಯಸ್ಥಿಕೆ ವಿಶೇಷ ಅಭಿಯಾನದಲ್ಲಿ ಹಲವಾರು ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ವಕೀಲರೇ ಮಧ್ಯಸ್ಥಿಕೆ ವಹಿಸಲಿದ್ದಾರೆ. ಪ್ರಕರಣಗಳ ಸ್ವರೂಪವನ್ನು ಗುರುತಿಸಿ ಅವುಗಳನ್ನು ಮಧ್ಯಸ್ಥಿಕೆದಾರರಿಗೆ ಕಳುಹಿಸಲಾಗುತ್ತದೆ. ಮಧ್ಯಸ್ಥಿಕೆದಾರರಿಂದ ಪಕ್ಷಗಾರರಿಗೆ ನೋಟಿಸು ಜಾರಿಯಾಗುತ್ತದೆ. 32 ಮಧ್ಯಸ್ಥಿಕೆದಾರರು ಇದ್ದಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನಾಡಿ, ‘ವೈವಾಹಿಕ, ಕೌಟುಂಬಿಕ, ಮೋಟಾರು ಅಪಘಾತ, ಚೆಕ್ ಅಮಾನ್ಯ ಸೇರಿದಂತೆ ರಾಜಿಯಾಗಲ್ಲ ಎಲ್ಲಾ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.
ಲೋಕ್ ಅದಾಲತ್‌ನಲ್ಲಿ ಸುಲಭವಾಗಿ, ವೇಗವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಲಾಗುತ್ತದೆ. ರಾಜಿ ಮುಖಾಂತರ ಇತ್ಯರ್ಥ ಮಾಡಿಕೊಂಡರೆ ವೈಷಮ್ಯ ಹೋಗುತ್ತದೆ. ಸಂಬಂಧ ಉತ್ತಮಗೊಳ್ಳುತ್ತದೆ ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ.ಆದರ್ಶ್ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಇದ್ದರು.
Highlights - ರಾಜಿಯಾಗಬಲ್ಲ ಪ್ರಕರಣಗಳ ಇತ್ಯರ್ಥ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದಿಂದ ಆಯೋಜನೆ ಅದಾಲತ್‌ನಿಂದ ಸಮಯ, ಹಣ ಉಳಿತಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.