
ಕೋಲಾರ: ರಾಜ್ಯದಲ್ಲಿ ಜೆಡಿಎಸ್ ಬೆಳೆಸಿದ್ದೇ ಜೆಡಿಯು. ಈಗ ಜೆಡಿಎಸ್ ಮುಖಂಡರ ಬೆಂಬಲದೊಂದಿಗೆ ರಾಜ್ಯದಲ್ಲಿ ಮತ್ತೆ ಜೆಡಿಯು ಪಕ್ಷ ಕಟ್ಟಿ ಬೆಳೆಸಲಾಗುವುದು. ಈ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸದ್ಯದಲ್ಲೇ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಮಹಿಮ ಜೆ.ಪಟೇಲ್ ತಿಳಿಸಿದರು.
ತಾಲ್ಲೂಕಿನ ಕಲ್ಲಂಡೂರಿನಲ್ಲಿ ಮಂಗಳವಾರ ಜೆಡಿಯು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜನತಾ ಪರಿವಾರ ರಾಜ್ಯದಲ್ಲಿ ಹಿಂದೆ ಉತ್ತಮ ಆಡಳಿತ ನಡೆಸಿದೆ. ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಉತ್ತಮ ಸರ್ಕಾರ ನೀಡಿದ್ದಾರೆ. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ರಾಜ್ಯದಲ್ಲಿ ಜೆಡಿಯು ಪಕ್ಷಕ್ಕೆ ಪುನಶ್ಚೇತನ ನೀಡಲಾಗುವುದು ಎಂದರು.
ಬೇರೆ ಬೇರೆ ಪಕ್ಷಗಳ ಪರಿಸ್ಥಿತಿ ನೋಡಿ ಆ ಪಕ್ಷಗಳು ಬೇಡ ಎಂಬ ತೀರ್ಮಾನಕ್ಕೆ ಹಲವು ನಾಯಕರು ಬಂದಿದ್ದಾರೆ. ರಾಜಕೀಯ ನಾಯಕರು ಅಲ್ಲದೇ; ಕಲಾವಿದರು, ಸಾಹಿತಿಗಳು, ವಿವಿಧ ಕ್ಷೇತ್ರಗಳ ಮುಖಂಡರು ನಮ್ಮ ಪಕ್ಷದ ಕಡೆ ನೋಡುತ್ತಿದ್ದಾರೆ ಎಂದು ಹೇಳಿದರು.
ಈಗಿನ ರಾಜಕೀಯ ವ್ಯವಸ್ಥೆಯಿಂದ ಜನರು ಗೊಂದಲ, ಅಸಹಾಯಕತೆ, ನಿರಾಶೆಯ ಭಾವನೆಯಲ್ಲಿದ್ದಾರೆ. ದೇಶದ 140 ಕೋಟಿ ಜನರಲ್ಲಿ ಕೇವಲ 3 ಲಕ್ಷ ಜನ ತೃಪ್ತಿಯಿಂದ ಇರಬಹುದು ಅಷ್ಟೆ. ಹೊಸ ವ್ಯವಸ್ಥೆ ಉದಯವಾಗಲು ಇದು ಸಕಾಲ ಎನಿಸುತ್ತಿದೆ. ವ್ಯವಸ್ಥೆಯ ಪರಿವರ್ತನೆ ಮಾಡಿ ಸುವ್ಯವಸ್ಥೆ ರೂಪಿಸಬೇಕಿದೆ. ಇದಕ್ಕೆ ತಿಳುವಳಿಕೆ ಹೊಂದಿರುವವರು, ಬುದ್ಧಿವಂತರು ಜನಪ್ರತಿನಿಧಿಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ಡಾ.ನಾಗರಾಜ್ ಅವರನ್ನು ಆಗ್ನೇಯ ಪದವೀಧರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರನ್ನು ಎನ್‌ಡಿಎ ಬೆಂಬಲ ಅಥವಾ ಹೊರಗಿನಿಂದ ಬೆಂಬಲ ಪಡೆದು ಜೆಡಿಯುನಿಂದ ಕಣಕ್ಕಿಳಿಸಲಾಗುತ್ತಿದೆ ಎಂದು ಹೇಳಿದರು.
ಜೆಡಿಯು ಯುವ ಘಟಕದ ರಾಜ್ಯ ಅಧ್ಯಕ್ಷ ಕಲ್ಲಂಡೂರು ಡಾ.ನಾಗರಾಜ್ ಮಾತನಾಡಿ, ‘ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಈಗಾಗಲೇ ಒಂದು ಸುತ್ತು ಮುಗಿಸಿ ಎರಡನೇ ಸುತ್ತಿನ ಪ್ರಚಾರದಲ್ಲಿ ತೊಡಗಿದ್ದೇವೆ. ಅತಿ ಹೆಚ್ಚು ಮತದಾರರನ್ನು ನೋಂದಣಿ ಮಾಡಿಸಿದ್ದೇವೆ’ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬಿಹಾರದವರು. ಬಿಹಾರದ ಸರ್ಕಾರದಲ್ಲಿ ಸಚಿವರಾದವರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ, ಮುಂಬರುವ ದಿನಗಳಲ್ಲಿ ನಮಗೆ ಸಹಾಯವಾಗಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.