ADVERTISEMENT

ವಿವಿಧ ಜಯಂತಿ ಆಚರಣೆಗೆ ಸರ್ಕಾರಿ ರಜೆ ಬೇಡ: ಮುಖಂಡರ ಸಲಹೆ

ವಿವಿಧ ಜಯಂತಿ ಆಚರಣೆ: ಅಭಿಪ್ರಾಯ ಸಂಗ್ರಹಣೆ ಸಭೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 14:55 IST
Last Updated 14 ಜನವರಿ 2020, 14:55 IST
ವಿವಿಧ ಜಯಂತಿ ಆಚರಣೆ ವಿಚಾರವಾಗಿ ಕೋಲಾರದಲ್ಲಿ ಮಂಗಳವಾರ ನಡೆದ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್‌ ಮಾತನಾಡಿದರು.
ವಿವಿಧ ಜಯಂತಿ ಆಚರಣೆ ವಿಚಾರವಾಗಿ ಕೋಲಾರದಲ್ಲಿ ಮಂಗಳವಾರ ನಡೆದ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್‌ ಮಾತನಾಡಿದರು.   

ಕೋಲಾರ: ವಿವಿಧ ಜಯಂತಿಗಳ ಆಚರಣೆ ವಿಚಾರವಾಗಿ ಸರ್ಕಾರದ ಸೂಚನೆಯಂತೆ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಯಿತು.

‘ಶ್ರದ್ಧೆಯಿಂದ ಜಯಂತಿ ಆಚರಣೆ ಮಾಡಬೇಕು. ರಜೆ ಹೆಸರಿನಲ್ಲಿ ಕಾಯಕ ಬಿಟ್ಟು ಜಯಂತಿ ಆಚರಿಸುವುದರಲ್ಲಿ ಅರ್ಥವಿಲ್ಲ. ಜಯಂತಿ ದಿನ ಸರ್ಕಾರಿ ರಜೆ ಬೇಡ. ಜಯಂತಿಯಂದು ಮಕ್ಕಳಿಗೆ ಮಹನೀಯರ ಪುಸ್ತಕ ಹಂಚಬೇಕು. ದಾಸೋಹದ ವ್ಯವಸ್ಥೆ ಇರಲಿ’ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಬಿ.ಎಂ.ಚನ್ನಪ್ಪ ಸಲಹೆ ನೀಡಿದರು.

‘ಜಯಂತಿಗಳ ಆಚರಣೆಯಿಂದ ಅರಿವು ಮೂಡಿಸುವ ಕೆಲಸವಾಗುತ್ತದೆ. ಅಲ್ಲಮಪ್ರಭು ಜಯಂತಿ, ಸಂಗೀತದ ಪಿತಾಮಹ ಪುರಂದರದಾಸರು, ತ್ಯಾಗರಾಜರ ಜಯಂತಿಯನ್ನೂ ಆಚರಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಬೇಕು’ ಎಂದು ಹರಿಕಥೆ ವಿದ್ವಾನ್‌ ಎನ್.ಆರ್.ಜ್ಞಾನಮೂರ್ತಿ ಹೇಳಿದರು.

ADVERTISEMENT

‘ಸರ್ಕಾರವೇ ಮಹನೀಯರ ಜಯಂತಿ ಆಚರಿಸಬೇಕೆಂದು ಈ ಹಿಂದೆ ಹೋರಾಟ ಮಾಡಿದ್ದೆ. ಜಯಂತಿ ಆಚರಣೆಯಿಂದ ಸಮುದಾಯಗಳು ಜನರಿಗೆ ತಿಳಿಯುತ್ತವೆ. ಆಯಾ ಸಮುದಾಯ ಗುರುತಿಸಿ ಜಯಂತಿ ಮಾಡುವುದರಿಂದ ಒಗ್ಗಟ್ಟು ಮೂಡುತ್ತದೆ’ ಎಂದು ದಲಿತ ಮುಖಂಡ ಚಂದ್ರಶೇಖರ್ ಅಭಿಪ್ರಾಯಪಟ್ಟರು.

‘ಭಾರತವನ್ನು ಇನ್ನೂ ಜಾತ್ಯಾತೀತ ರಾಷ್ಟ್ರವೆಂದು ಸಂಪೂರ್ಣವಾಗಿ ಒಪ್ಪಿಕೊಂಡಂತಿಲ್ಲ. ಆಯಾ ಸಮುದಾಯದವರಷ್ಟೇ ಜಯಂತಿಯಲ್ಲಿ ಭಾಗವಹಿಸುವುದರಿಂದ ಜಾತಿ ವ್ಯವಸ್ಥೆ ಹೆಚ್ಚುತ್ತಿದೆ. ಎಲ್ಲಾ ಸಮುದಾಯಗಳನ್ನು ಸೇರಿಸಿ ಜಯಂತಿ ನಡೆಸಬೇಕು. ಸರ್ಕಾರ ಇನ್ನಷ್ಟು ಅನುದಾನ ನೀಡಿ ಸರಳವಾಗಿ ಹಾಗೂ ಜಾತ್ಯಾತೀತವಾಗಿ ಜಯಂತಿ ನಡೆಸಲಿ. ಯಾವುದೇ ಜಯಂತಿ ನಿಲ್ಲಿಸಬಾರದು’ ಎಂದರು.

ಕರಪತ್ರ ವಿತರಿಸಿ: ‘ಮಹನೀಯರ ಮಾಹಿತಿ ಒಳಗೊಂಡ ಕರಪತ್ರ ವಿತರಿಸಬೇಕು. ರಜೆಯಿದ್ದರೆ ಶಾಲೆಗಳಲ್ಲಿ ಹಿಂದಿನ ದಿನ ಅಥವಾ ಮರುದಿನ ಜಯಂತಿ ಆಚರಿಸಬೇಕು’ ಎಂದು ಕೆಜಿಎಫ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೇಶಪಾಂಡೆ ಹೇಳಿದರು.

‘ಎಲ್ಲಾ ಸಮುದಾಯಗಳ ಮಹನೀಯರ ಬಗ್ಗೆ ಗೌರವವಿದೆ. ಗಾಂಧಿ ಮತ್ತು ಅಂಬೇಡ್ಕರ್ ಜಯಂತಿ ಮಾತ್ರ ಸಾಕು. ಉಳಿದ ಮಹನೀಯರ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು’ ಎಂದು ಸಾಂತ್ವಾನ ಕೇಂದ್ರದ ಸದಸ್ಯೆ ಮಮತಾರೆಡ್ಡಿ ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಮಹನೀಯರ ಬಗ್ಗೆ ಅರಿವು ಮೂಡಿಸಬೇಕು. ಪ್ರಬಂಧ, ಭಾಷಣ, ಚರ್ಚಾ ಸ್ಪರ್ಧೆ ಆಯೋಜಿಸಿ ನಗದು ಅಥವಾ ಪುಸ್ತಕ ಬಹುಮಾನ ನೀಡಬೇಕು. ರಂಗಮಂದಿರದಲ್ಲಿ ನಡೆಯುವ ಜಯಂತಿಗಳ ಆಚರಣೆ ವಿಕೇಂದ್ರೀಕರಣ ಆಗಲಿ. ಸರ್ಕಾರಿ ಶಿಷ್ಟಾಚಾರ ಹಾಗೂ ರಾಜಕಾರಣಿಗಳ ಅಗತ್ಯವಿಲ್ಲ. ಸರ್ಕಾರಿ ರಜೆ ಬೇಡ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಸಲಹೆ ಕೊಟ್ಟರು.

‘ಜಯಂತಿ ಆಚರಣೆಯಿಂದ ಸಾಮಾಜಿಕ ಪರಿವರ್ತನೆ ಆಗುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವ ಸಮಿತಿ ರಚಿಸಬೇಕು. ಎಲ್ಲಾ ಜಯಂತಿಗಳಿಗೆ ಒಂದೇ ಬಾರಿ ಸಭೆ ಸೇರಿ ಕ್ರಿಯಾಯೋಜನೆ ರೂಪಿಸಬೇಕು. ಸ್ತಬ್ಧ ಚಿತ್ರಗಳ ಬೃಹತ್‌ ಮೆರವಣಿಗೆ ರೀತಿ ಹಾಗೂ ಕಾಟಾಚಾರಕ್ಕೆ ಜಯಂತಿ ಆಚರಿಸುವುದು ಬೇಕಾ?’ ಎಂದು ಜನಪದ ಕಲಾವಿದ ರಾಜಪ್ಪ ಪ್ರಶ್ನಿಸಿದರು.

ವರದಿ ಸಲ್ಲಿಸುತ್ತೇವೆ: ‘ಜಯಂತಿಗಳ ಆಚರಣೆಯಿಂದ ಎಲ್ಲಾ ಸಮುದಾಯಗಳು ಒಂದೆಡೆ ಸೇರಲು, ಮಹನೀಯರ ತತ್ವ ಸಿದ್ಧಾಂತ, ಕಲೆ ಸಾಹಿತ್ಯ ಸಂಸ್ಕೃತಿ ತಿಳಿಯಲು ಸಹಾಯವಾಗುತ್ತದೆ. ಸರ್ಕಾರದಿಂದ ಜಯಂತಿ ಆಚರಿಸಿದರೆ ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸಬಹುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

‘ಜಯಂತಿಗಳ ದಿನ ಸರ್ಕಾರಿ ರಜೆ ಬೇಡ. ಶಾಲಾ ಕಾಲೇಜುಗಳಲ್ಲಿ ಜಯಂತಿ ನಡೆಸಿ. ರಜೆ ಬಿಟ್ಟು ಆ ದಿನ ಹೆಚ್ಚು ಕೆಲಸ ಮಾಡಬೇಕು. ಜಯಂತಿ ಆಚರಣೆಯಿಂದ ಕಲಾವಿದರಿಗೆ ಸಹಾಯ ಸಿಗುವಂತಾಗಿದೆ. ಶಿಷ್ಟಾಚಾರಕ್ಕೆ ಆದ್ಯತೆ ಬೇಡ. ರಂಗಮಂದಿರ ಬಿಟ್ಟು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಜಯಂತಿ ಆಚರಿಸಬೇಕೆಂಬ ಸಲಹೆ ಬಂದಿದೆ. ಈ ಸಲಹೆಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.