ADVERTISEMENT

ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪವಿಲ್ಲ: ಸಚಿವ ಆರ್‌.ಶಂಕರ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 14:27 IST
Last Updated 20 ಫೆಬ್ರುವರಿ 2021, 14:27 IST
ಸಚಿವ ಆರ್‌.ಶಂಕರ್‌
ಸಚಿವ ಆರ್‌.ಶಂಕರ್‌    

ಕೋಲಾರ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆರೋಪಿಸಿರುವಂತೆ ವಿಜಯೇಂದ್ರ ಅವರು ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಯತ್ನಾಳರ ಹೇಳಿಕೆಯಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಹಾನಿಯಿಲ್ಲ’ ಎಂದು ತೋಟಗಾರಿಕೆ ಸಚಿವ ಆರ್‌.ಶಂಕರ್‌ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಸಹ ಸಚಿವ ಸಂಪುಟದಲ್ಲಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ವಿಜಯೇಂದ್ರ ಅವರು ಸರ್ಕಾರದಲ್ಲಿ ಮೂಗು ತೂರಿಸುವುದಿಲ್ಲ. ಅವರು ಈವರೆಗೆ ನನಗೆ ಏನೂ ಕೇಳಿಲ್ಲ ಮತ್ತು ಹೇಳಿಲ್ಲ’ ಎಂದರು.

‘ಯತ್ನಾಳರ ವೈಯಕ್ತಿಕ ಟೀಕೆಗಳಿಗೆ ಉತ್ತರಿಸುವಷ್ಟು ದೊಡ್ಡವನಲ್ಲ. ಪಕ್ಷದ ವರಿಷ್ಠರು ಆ ಬಗ್ಗೆ ತೀರ್ಮಾನ ಮಾಡುತ್ತಾರೆ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಮಾಡಲು ಸಾಕಷ್ಟು ಕೆಲಸವಿದೆ. ಆ ಬಗ್ಗೆ ಗಮನ ಹರಿಸಿದ್ದೇನೆ. ಯತ್ನಾಳರ ಊಹಾಪೋಹದ ಹೇಳಿಕೆಗೆ ಏನು ಉತ್ತರ ನೀಡಲಿ?’ ಎಂದು ಪ್ರಶ್ನಿಸಿದರು.

ADVERTISEMENT

‘ವಿವಿಧ ಸಮುದಾಯದವರು ಹೋರಾಟ ಮಾಡಿ ಮೀಸಲಾತಿ ಕೇಳುತ್ತಿದ್ದಾರೆ. ಅದು ಅವರ ಹಕ್ಕು. ಮೀಸಲಾತಿ ಕೇಳುವುದನ್ನೇ ಸರ್ಕಾರದ ಮೇಲಿನ ಒತ್ತಡ ಎಂದುಕೊಳ್ಳಬೇಕಿಲ್ಲ. ಈ ವಿಚಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ. ಅವರಿಗೆ ಯಾವುದೇ ಒತ್ತಡವಿಲ್ಲ. ಅವರ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಸಂಪುಟ ಸಹದ್ಯೋಗಿಗಳು ತಿಳಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.