ADVERTISEMENT

ಕೊರೊನಾ ಸಂಕಷ್ಟದಲ್ಲಿ ರಾಜಕೀಯ ಬೇಡ: ನಿಖಿಲ್‌ ಕುಮಾರಸ್ವಾಮಿ

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 4:06 IST
Last Updated 9 ಜುಲೈ 2021, 4:06 IST
ಕೋಚಿಮುಲ್‌ನಿಂದ ನಂಗಲಿಯಲ್ಲಿ ನಡೆದ ಹಾಲು ಉತ್ಪಾದಕರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು
ಕೋಚಿಮುಲ್‌ನಿಂದ ನಂಗಲಿಯಲ್ಲಿ ನಡೆದ ಹಾಲು ಉತ್ಪಾದಕರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು   

ನಂಗಲಿ: ‘ಕೊರೊನಾದಿಂದ ಜನರು ಸಂಕಷ್ಟದಲ್ಲಿರುವಾಗ ಜೆಡಿಎಸ್ ವತಿಯಿಂದ ಹತ್ತು ಸಾವಿರ ಮಂದಿಗೆ ದಿನಸಿ ಕಿಟ್‌ ವಿತರಿಸುತ್ತಿರುವುದು ಶ್ಲಾಘನೀಯ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಂಗಲಿಯ ವೈಭವ್ ಸಮುದಾಯ ಭವನದಲ್ಲಿ ಗುರುವಾರ ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನಡೆದ ಹಾಲು ಉತ್ಪಾದಕರಿಗೆ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾನಾಡಿದರು.

ಕೊರೊನಾ ಎರಡನೇ ಅಲೆ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿತು. ಮೂರನೇ ಅಲೆಯೂ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರ ಆರೋಗ್ಯ ಕಾಪಾಡಿಕೊಂಡು ಕಷ್ಟದಲ್ಲಿರುವವರಿಗೆ ಸಹಾಯಕ್ಕೆ ನಿಲ್ಲಬೇಕಾಗಿದೆ. ಇಂತಹ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು.

ADVERTISEMENT

ರಾಜಕಾರಣದಲ್ಲಿ ಸೋಲು, ಗೆಲುವು ಸಹಜ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಸಮೃದ್ಧಿ ಮಂಜುನಾಥ್ ಸೋತರೂ ಕ್ಷೇತ್ರದ ಜನರ ಸೇವೆಯಲ್ಲಿದ್ದಾರೆ. ಹೀಗೆಯೇ ಜನರ ಸೇವೆ ಮುಂದುವರಿಸಿ ಪ್ರತಿನಿತ್ಯ ಅವರ ಜೊತೆ ಬೆರೆಯಬೇಕು ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವ ಮೂಲಕ ಜನಪರ ಮತ್ತು ರೈತಪರ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಆದರೆ, 5 ವರ್ಷ ಪೂರ್ತಿ ಅಧಿಕಾರ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನಾಡು, ನುಡಿಯನ್ನು ಉತ್ತುಂಗಕ್ಕೆ ಏರಿಸುವ ಮೂಲಕ ಜನಸಾಮಾನ್ಯರ ಸೇವೆ ಮಾಡಲಿದ್ದಾರೆ. ಕರ್ನಾಟಕದ ಅಭಿವೃದ್ಧಿಯಾಗಲು ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಮಾತನಾಡಿ, ಕೊರೊನಾದಿಂದ ಕ್ಷೇತ್ರ ಸಮಸ್ಯೆಗೆ ಸಿಲುಕಿದೆ. ಇಂತಹ ಸಮಯದಲ್ಲಿ ಕಷ್ಟದಲ್ಲಿರುವವರ ಕೈ ಹಿಡಿಯುವುದು ನನ್ನ ಕೆಲಸ. ಹಾಗಾಗಿ ಕ್ಷೇತ್ರದ ಜನರಿಗೆ ಯಾವುದೇ ಸಂಕಷ್ಟ ಎದುರಾದರೂ ಸೇವೆ ಮಾಡಲು ನಾನು ಸದಾ ಸಿದ್ಧ’ ಎಂದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಮುಖಂಡ ಆಲಂಗೂರು ಶಿವಣ್ಣ, ನಗರಸಭಾ ಅಧ್ಯಕ್ಷ ರಿಯಾಜ್ ಅಹ್ಮದ್, ಡಾ.ಪ್ರಕಾಶ್, ಸಾಮೇಗೌಡ, ರಘುಪತಿರೆಡ್ಡಿ, ತೇಜೋರಮಣ, ಮಾಲೂರು ರಾಮೇಗೌಡ, ಶ್ರೀಧರ್, ಮುನಿಸ್ವಾಮಿಗೌಡ, ಎಂ. ಗೊಲ್ಲಹಳ್ಳಿ ಪ್ರಭಾಕರ್, ಚಂದ್ರು, ವರದಪ್ಪ, ನಂಗಲಿ ಕಿಶೋರ್, ಸುಬ್ಬರಾಮ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.