ADVERTISEMENT

ಬಂಗಾರಪೇಟೆ: ನರೇಗಾದಲ್ಲಿ ಅರಳಿದ ಉದ್ಯಾನವನ

ಹಿರಿಯ ನಾಗರಿಕರು, ಮಕ್ಕಳು, ಯುವಕರ ವಾಯುವಿಹಾರಕ್ಕೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 7:36 IST
Last Updated 20 ಜುಲೈ 2025, 7:36 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಗ್ರಾಮದಲ್ಲಿ ವೃಷಭಾವತಿ ಕೆರೆ ಅಂಗಳದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಉದ್ಯಾನವನ
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಗ್ರಾಮದಲ್ಲಿ ವೃಷಭಾವತಿ ಕೆರೆ ಅಂಗಳದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಉದ್ಯಾನವನ   

ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ವೃಷಭಾವತಿ ಕರೆ ಅಂಗಳದಲ್ಲಿ ನರೇಗಾ ಯೋಜನೆ ಅಡಿ ಗ್ರಾಮೀಣ ಉದ್ಯಾನ ನಿರ್ಮಿಸಲಾಗಿದೆ.

ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶ ನೀಡುವ ಜೊತೆಗೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾರಿಗೆ ತರಲಾದ ನರೇಗಾ ಯೋಜನೆಯಡಿ ರೈತರ ಜಮೀನುಗಳು, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ನರೇಗಾ ಯೋಜನೆ ಇಷ್ಟಕ್ಕೆ ಸೀಮಿತವಾಗದೆ ಜನರ ಆರೋಗ್ಯದ ದೃಷ್ಟಿಯಿಂದ ಕಾಮಸಮುದ್ರ ವೃಷಭಾವತಿ ಕೆರೆ ಅಂಗಳದಲ್ಲಿ ಸುಂದರವಾದ ಉದ್ಯಾನವನ ವಿನ್ಯಾಸಗೊಳಿಸಲಾಗಿದ್ದು, ಜನರ ಕಣ್ಮನ ಸೆಳೆಯುತ್ತಿದೆ. 

ಇದರಿಂದಾಗಿ ವೃಷಭಾವತಿ ಕೆರೆಯು ಇದೀಗ ಪ್ರವಾಸಿಗರ ಕೇಂದ್ರವಾಗಿ ಮಾರ್ಪಟ್ಟಿದೆ. 

ADVERTISEMENT

ಕಾಮಸಮುದ್ರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ವೃಷಭಾವತಿ ಕರೆ ಅಂಗಳದಲ್ಲಿ ಇರುವ ಸರ್ಕಾರಿ ಭೂಮಿ ಬಳಸಿಕೊಂಡು 100x100 ಅಳತೆ ಜಾಗದಲ್ಲಿ ₹10 ಲಕ್ಷ ವೆಚ್ಚದಲ್ಲಿ ನರೇಗಾ ಯೋಜನೆಯಡಿ ಉದ್ಯಾನ ನಿರ್ಮಿಸಲಾಗಿದೆ. ಈ ಉದ್ಯಾನಕ್ಕೆ ಗ್ರಾಮಸ್ಥರು ಪ್ರತಿನಿತ್ಯ ವಾಕಿಂಗ್ ಮತ್ತು ವ್ಯಾಯಾಮ ಮಾಡಲು ಬರುತ್ತಿದ್ದಾರೆ. ಇದರಿಂದ ಗ್ರಾಮಸ್ಥರ ಆರೋಗ್ಯಕ್ಕೂ ಉದ್ಯಾನ ಸಹಕಾರಿಯಾಗಿದೆ. 

ಗ್ರಾಮದ ಹಿರಿಯ ನಾಗರಿಕರು ಮತ್ತು ಮಹಿಳೆಯರು, ಸಾರ್ವಜನಿಕರು, ಪ್ರತಿನಿತ್ಯ ವಾಯುವಿಹಾರಕ್ಕಾಗಿ ಮುಖ್ಯರಸ್ತೆಗೆ ಹೋಗುತ್ತಿದ್ದರು. ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದ ಕಾರಣ ಅಪಘಾತಗಳಿಗೆ ತುತ್ತಾಗುವ ಅಪಾಯವಿತ್ತು. ಇದೀಗ ಕೆರೆ ಅಂಗಳದಲ್ಲಿ ಉದ್ಯಾನವನ ನಿರ್ಮಾಣವಾಗಿದ್ದರಿಂದಾಗಿ ಪ್ರತಿನಿತ್ಯವೂ ಅಲ್ಲೇ ವ್ಯಾಯಾಮ ಮತ್ತು ವಾಯುವಿಹಾರ ಮಾಡುತ್ತಿರುವುದಾಗಿ ಜನರು ಹೇಳುತ್ತಿದ್ದಾರೆ.

ಉದ್ಯಾನದ ಸುತ್ತಲೂ ಮೆಶ್ ಅಳವಡಿಸಲಾಗಿದೆ. ಪಾದಚಾರಿ ಮಾರ್ಗ, ಆಯುರ್ವೇದ ಸಸ್ಯಗಳು ಮತ್ತು ಆಕರ್ಷಕವಾದ ಸಸ್ಯಕಾಶಿಗಳನ್ನು ನೆಡಲಾಗಿದೆ. ಗಿಡಗಳಿಗೆ ಪಂಚಾಯಿತಿ ಪೈಪ್‌ಲೈನ್‌ ಮೂಲಕ ನೀರು ಹಾಯಿಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸ್ಥಳೀಯರು, ಮಹಿಳೆಯರು, ವೃದ್ಧರು ಇಲ್ಲೇ ವಾಯುವಿಹಾರ ಮಾಡಲು ಅನುಕೂಲವಾಗಿದೆ. 

ವೃಷಭಾವತಿ ಕರೆ ಅಂಗಳದಲ್ಲಿ ನಿರ್ಮಿಸಿರುವ ಉದ್ಯಾನದಿಂದ ಈ ಸ್ಥಳವು ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ಈ ಭಾಗದ ಶಾಲಾ ಮಕ್ಕಳು ಹಾಗೂ ಜನರಿಗೆ ಅನುಕೂಲವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಆದಿನಾರಾಯಣ ಕುಟ್ಟಿ ಹೇಳಿದರು. 

ಉದ್ಯಾನವು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿದ್ದು ಉಳಿದ ಗ್ರಾಮ ಪಂಚಾಯಿತಿಗಳಿಗೂ ಮಾದರಿಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಚ್‌.ರವಿಕುಮಾರ್, ಕಾರ್ಯ ನಿರ್ವಾಹಕ ಅಧಿಕಾರಿ ಬಂಗಾರಪೇಟೆ
ಕಾಮಸಮುದ್ರ ಹೋಬಳಿ ಕೇಂದ್ರವಾಗಿದ್ದು ಜನರ ಹಿತದೃಷ್ಟಿಯಿಂದ ನರೇಗಾದ ಅಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಉಪಯೋಗಕ್ಕಾಗಿ ಹಲವು ಕಾಮಗಾರಿಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. 
ವಾಣಿ, ಪಿಡಿಒ, ಕಾಮಸಮುದ್ರ ಗ್ರಾಮ ಪಂಚಾಯಿತಿ
ಉದ್ಯಾನವನದ ಹೊರನೋಟ
ಉದ್ಯಾನವನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.