ADVERTISEMENT

ನರೇಗಾ: ಯಂತ್ರೋಪಕರಣ ಬಳಕೆ ಆರೋಪ

ಸಾಕರಸನಹಳ್ಳಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:54 IST
Last Updated 7 ನವೆಂಬರ್ 2025, 6:54 IST
ಚರಂಡಿ ನಿರ್ಮಿಸದೆ ಬಂಗಾರಪೇಟೆ ತಾಲ್ಲೂಕಿನ ಸಾಕರಸನಹಳ್ಳಿ ಗ್ರಾಮದಿಂದ ಬಸವೇಶ್ವರ ದೇವಸ್ಥಾನದವರೆಗೆ ನಿರ್ಮಾಣವಾಗಿರುವ ರಸ್ತೆ ಕಾಮಗಾರಿ
ಚರಂಡಿ ನಿರ್ಮಿಸದೆ ಬಂಗಾರಪೇಟೆ ತಾಲ್ಲೂಕಿನ ಸಾಕರಸನಹಳ್ಳಿ ಗ್ರಾಮದಿಂದ ಬಸವೇಶ್ವರ ದೇವಸ್ಥಾನದವರೆಗೆ ನಿರ್ಮಾಣವಾಗಿರುವ ರಸ್ತೆ ಕಾಮಗಾರಿ   

ಬಂಗಾರಪೇಟೆ: ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾಮಗಾರಿಗಳಲ್ಲಿ ನಿಯಮಬಾಹಿರವಾಗಿ ಯಂತ್ರೋಪಕರಣ ಬಳಸಿ ಯೋಜನೆಯ ಉದ್ದೇಶಕ್ಕೆ ತಿಲಾಂಜಲಿ ಹಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಬಡ ಜನರಿಗೆ ಉದ್ಯೋಗ ಖಾತ್ರಿ ನೀಡುವ ಉದ್ದೇಶದಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಜಾರಿಗೊಳಿಸಿದೆ. ಆದರೆ, ದೋಣಿಮಡಗು ಗ್ರಾ.ಪಂ ಸದಸ್ಯರು ಹಾಗೂ ಅಧಿಕಾರಿಗಳು ಯಂತ್ರೋಪಕರಣ ಬಳಸಿ ಕಾಮಗಾರಿಯನ್ನು ನಡೆಸಿದ್ದಾರೆ.

ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾಕರಸನಹಳ್ಳಿಯಲ್ಲಿ ನರೇಗಾ ಯೋಜನೆಯಡಿ 2025-26ನೇ ಸಾಲಿನಲ್ಲಿ ಅಂದಾಜು ₹6 ಲಕ್ಷ ಮೊತ್ತದಲ್ಲಿ ಸಾಕರಸನಹಳ್ಳಿಯಿಂದ ಬಸವೇಶ್ವರ ದೇವಸ್ಥಾನದವರೆಗೆ ರಸ್ತೆ ಕಾಮಗಾರಿ ನಡೆದಿದೆ. ಆದರೆ, ಕ್ರಿಯಾ ಯೋಜನೆಯಂತೆ ಕಾಮಗಾರಿ ಮಾಡದೆ, ಕಳಪೆ ಗುಣಮಟ್ಟದಿಂದ ಕಾಮಗಾರಿ ಮಾಡಲಾಗಿದೆ. ರಸ್ತೆಯ ಎರಡು ಬದಿಯಲ್ಲಿ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಿಸಿಲ್ಲ. ಕೇವಲ ಬಿಲ್ ಮಾಡಿಕೊಳ್ಳಲು ನಾಮಕಾವಸ್ಥೆಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಶಾಮೀಲಾಗಿ ಯಂತ್ರೋಪಕರಣ ಬಳಸಿ, ಕೂಲಿ ಕಾರ್ಮಿಕರನ್ನು ವಂಚಿಸಿ ಕಳಪೆ ಕಾಮಗಾರಿ ನಡೆಸಿದ್ದಾರೆ. ಲಕ್ಷಾಂತರ ರೂಪಾಯಿ ಬಿಲ್‌ಗಳನ್ನು ದೋಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನರೇಗಾ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ರಸ್ತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ
– ಆನಂದ್, ಪಿಡಿಒ ದೋಣಿಮಡಗು ಗ್ರಾಮ ಪಂಚಾಯಿತಿ
ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
– ಅಪ್ಪೋಜಿ ರಾವ್, ತಾಲ್ಲೂಕು ಅಧ್ಯಕ್ಷ ರೈತ ಸಂಘ
ರಸ್ತೆ ನಿರ್ಮಾಣ ಕಾಮಗಾರಿಯಲ್ಲಿನ ಅಕ್ರಮಗಳನ್ನು ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು
– ಹುಣಸನಹಳ್ಳಿ ಎನ್. ವೆಂಕಟೇಶ್, ರಾಜ್ಯಾಧ್ಯಕ್ಷ ದಲಿತ ರೈತ ಸೇನೆ
ಕ್ರಿಯಾ ಯೋಜನೆಯಂತೆ ರಸ್ತೆ ನಿರ್ಮಾಣ ಮಾಡಿ ಎರಡೂ ಬದಿಯಲ್ಲಿ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಾಣ ಮಾಡಬೇಕು.
– ಬಸಪ್ಪ, ರೈತ ಸಾಕರಸನಹಳ್ಳಿ

ಕಾಯಕ ಮಿತ್ರ ಇದ್ದರೂ ಪ್ರಯೋಜನವಿಲ್ಲ

ಕಾಯಕ ಮಿತ್ರ ಇದ್ದರೂ ಯಾವುದೇ ಪ್ರಯೋಜನವಿಲ್ಲ. ಕಾಯಕ ಮಿತ್ರ ಎದುರಿಗೆ ಜನರನ್ನು ಬೆಳಗ್ಗೆ ಮತ್ತು ಮಧ್ಯಾಹ್ನ ಪೋಟೋಗಾಗಿ ಪ್ರತಿ ದಿನ ₹100 ಕೊಟ್ಟು ಫೋಟೋ ತೆಗೆಸಿದ ನಂತರ ಯಂತ್ರಗಳ ಮೂಲಕ ಕಾಮಗಾರಿ ಮಾಡಿ ಕಾರ್ಮಿಕರನ್ನು ವಂಚಿಸಲಾಗಿದೆ.
– ಶಿವಕುಮಾರ್, ಸಾಕರಸನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.