ADVERTISEMENT

ಕೋಲಾರ: ಶತಕದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಸೋಂಕಿನ ಪ್ರಮಾಣದಲ್ಲಿ ದಾಖಲೆ ಏರಿಕೆ: ತಗ್ಗಿದ ಗುಣಮುಖ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 14:59 IST
Last Updated 17 ಸೆಪ್ಟೆಂಬರ್ 2020, 14:59 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗುರುವಾರ ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

ಹೊಸದಾಗಿ 137 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 835ಕ್ಕೆ ಜಿಗಿದಿದೆ. ಕಳೆದ ಏಳೆಂಟು ದಿನಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರಲಿಲ್ಲ. ಇದೀಗ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಳವಾಗಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.

ಮುಖ್ಯವಾಗಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ವಿಷಮ ಶೀತ ಜ್ವರವಿರುವ 82 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 44 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ADVERTISEMENT

ಮುಳಬಾಗಿಲು ತಾಲ್ಲೂಕಿನಲ್ಲಿ ಅತಿ ಹೆಚ್ಚು 40 ಮಂದಿಗೆ ಸೋಂಕು ಬಂದಿದೆ. ವಿಷಮ ಶೀತ ಜ್ವರಪೀಡಿತ 39 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ ಸೋಂಕು ತಗುಲಿದೆ. ಕೋಲಾರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 21 ಮಂದಿಗೆ, ಸೋಂಕಿತರ ಸಂಪರ್ಕದಿಂದ 6 ಮಂದಿಗೆ, 3 ಮಂದಿ ಆರೋಗ್ಯ ಕಾರ್ಯಕರ್ತರಿಗೆ, ಹೊರ ಜಿಲ್ಲೆಗೆ ಹೋಗಿದ್ದ ಒಬ್ಬರಿಗೆ, ಇಬ್ಬರು ಗರ್ಭಿಣಿಯರಿಗೆ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರಿಗೆ ಸೋಂಕು ಹರಡಿದೆ.

ಮಾಲೂರು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 4 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 14 ಮಂದಿಗೆ, ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ ಒಬ್ಬರಿಗೆ ಹಾಗೂ ಸೋಂಕಿತರ ಸಂಪರ್ಕದಿಂದ 5 ಮಂದಿಗೆ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಪೀಡಿತ 17 ಮಂದಿಗೆ, ಇಬ್ಬರು ಗರ್ಭಿಣಿಯರಿಗೆ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬರಿಗೆ ಸೋಂಕು ಬಂದಿದೆ.

ಕೆಜಿಎಫ್ ತಾಲ್ಲೂಕಿನಲ್ಲಿ 18 ಮಂದಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.