ADVERTISEMENT

ಆನ್‌ಲೈನ್‌ ಶಿಕ್ಷಣದ ದಂಧೆ; ಜೂನ್‌ನಲ್ಲಿ ಸ್ಪಷ್ಟ ನಿರ್ಧಾರ: ಸಚಿವ ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 30 ಮೇ 2020, 14:09 IST
Last Updated 30 ಮೇ 2020, 14:09 IST
ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌
ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌   

ಕೋಲಾರ: ‘ಆನ್‌ಲೈನ್‌ ಶಿಕ್ಷಣವು ಗೀಳಾಗಿದೆ. ಖಾಸಗಿ ಶಾಲೆಗಳು ಹಣದಾಸೆಗೆ ಇದನ್ನು ದಂಧೆ ಮಾಡಿಕೊಂಡಿವೆ. ನಿಮ್ಹಾನ್ಸ್ ವೈದ್ಯರ ಪ್ರಕಾರ 6 ವರ್ಷದ ಮಗುವಿನವರೆಗೆ ಆನ್‌ಲೈನ್ ಶಿಕ್ಷಣ ಸೂಕ್ತವಲ್ಲ’ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆನ್‌ಲೈನ್‌ ಶಿಕ್ಷಣವು ಮಕ್ಕಳಿಗೆ ಅರ್ಥವಾಗದ ವಿಚಾರ. ಈ ಶಿಕ್ಷಣ ವ್ಯವಸ್ಥೆ ಕುರಿತು ಸರ್ಕಾರ ಮುಂದಿನ ವಾರ ಸ್ಪಷ್ಟ ನಿರ್ಧಾರಕ್ಕೆ ಬರಲಿದೆ’ ಎಂದು ತಿಳಿಸಿದರು.

‘ಕೊರೊನಾ ಸೋಂಕು ಹೇಳಿಕೇಳಿ ಬಂದಿಲ್ಲ. ದೇಶದೆಲ್ಲೆಡೆ ಮಾರ್ಚ್‌ನಲ್ಲಿ ಸೋಂಕು ಕಾಣಿಸಿಕೊಂಡಿತು. ಇದು ಇತರೆ ಕ್ಷೇತ್ರಗಳಿಗಿಂತ ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಗುಂಪು ಸೇರದೆ ಇರುವುದು ಇದಕ್ಕೆ ದಿವ್ಯೌಷಧ. ಏಡ್ಸ್‌, ಚಿಕೂನ್‌ ಗುನ್ಯ, ಎಚ್‌೧ಎನ್‌೧ ಜತೆ ಜನ ಬೆರೆತು ಹೋದಂತೆ ಕೊರೊನಾ ಸೋಂಕಿನ ಜತೆಯೂ ಬದುಕು ಸಾಧ್ಯ. ಕೇಂದ್ರದಿಂದ ನಿರ್ದೇಶನ ಬಂದರೆ ದೇವಸ್ಥಾನ, ಮಾಲ್ ಆರಂಭವಾಗಲಿವೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ರಾಜ್ಯದಲ್ಲಿ 8.48 ಲಕ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಲಾಕ್‌ಡೌನ್‌ ಕಾರಣಕ್ಕೆ ನಿಗದಿತ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಇದೀಗ ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆ ನಡೆಯಲಿದ್ದು, ಒಂದು ಕೊಠಡಿಗೆ 18ರಿಂದ 24 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ರೆಡ್‌ಕ್ರಾಸ್ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ವತಿಯಿಂದ ಪ್ರತಿ ವಿದ್ಯಾರ್ಥಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಆತಂಕ ಬೇಡ: ‘ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗುತ್ತದೆ. ಸುಸೂತ್ರವಾಗಿ ಪರೀಕ್ಷೆ ನಡೆಸುವ ಸಂಬಂಧ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದೇವೆ. ಪೋಷಕರು ಮಕ್ಕಳ ಆರೋಗ್ಯದ ವಿಚಾರವಾಗಿ ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಪರಿಶೀಲಿಸಿದ್ದೇನೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಂದನ ವಾಹಿನಿಯಲ್ಲಿ ಪುನರ್ಮನನ ತರಗತಿ ಆರಂಭಿಸಲಾಗಿದೆ. ವಲಸೆ ಕಾರ್ಮಿಕರ ಮಕ್ಕಳಿಗೆ ಅವರಿರುವ ಸ್ಥಳದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತೇವೆ. ಕಂಟೈನ್‌ಮೆಂಟ್‌ ಪ್ರದೇಶದಲ್ಲಿನ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.