ADVERTISEMENT

ಆಪರೇಷನ್ ಕ್ಲೀನ್ ವೇಮಗಲ್: ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 4:36 IST
Last Updated 19 ಡಿಸೆಂಬರ್ 2025, 4:36 IST
<div class="paragraphs"><p>ಪಟ್ಟಣ ಪಂಚಾಯಿತಿ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ</p></div>

ಪಟ್ಟಣ ಪಂಚಾಯಿತಿ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ

   

ವೇಮಗಲ್: ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ನಿಷೇಧಿತ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ತೊಡೆದು ಹಾಕಲು ವೇಮಗಲ್ ಪಟ್ಟಣ ಪಂಚಾಯಿತಿ ಈಗ ‘ಆಪರೇಷನ್ ಕ್ಲೀನ್ ವೇಮಗಲ್’ ಆರಂಭಿಸಿದೆ. ಪಟ್ಟಣದಾದ್ಯಂತ ಅಧಿಕಾರಿಗಳು ಹಮ್ಮಿಕೊಂಡಿರುವ ಕಟ್ಟುನಿಟ್ಟಿನ ಕ್ರಮ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

ಪಟ್ಟಣದಲ್ಲಿ ಎಲ್ಲೆಡೆ ಪ್ಲಾಸ್ಟಿಕ್ ಯಥೇಚ್ಛವಾಗಿ ಕಂಡು ಬರುತ್ತಿದೆ. ಸ್ಥಳೀಯ ಆಡಳಿತ ಪ್ರತಿನಿತ್ಯ ಸ್ವಚ್ಛತೆ ಮಾಡಿದರೂ, ಪ್ಲಾಸ್ಟಿಕ್ ರಸ್ತೆಗೆ ಬರುವುದು ಕಡಿಮೆಯಾಗಿರಲಿಲ್ಲ. ಹೀಗಾಗಿ, ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಆಡಳಿತ, ಪ್ಲಾಸ್ಟಿಕ್ ಬಳಸುವ ಅಂಗಡಿಗಳ ಮೇಲೆ ದಾಳಿ ಆರಂಭಿಸಿದೆ.

ADVERTISEMENT

ನಿದ್ದೆಗೆಟ್ಟ ಅಧಿಕಾರಿಗಳು: ಸಾಮಾನ್ಯವಾಗಿ ಅಧಿಕಾರಿಗಳು ಕಚೇರಿ ಅವಧಿಯಲ್ಲಿ ತಪಾಸಣೆ ನಡೆಸುತ್ತಾರೆ ಎಂಬುದು ವ್ಯಾಪಾರಿಗಳ ಲೆಕ್ಕಾಚಾರವಾಗಿತ್ತು. ಆದರೆ, ಈ ಲೆಕ್ಕಾಚಾರವನ್ನು ಉಲ್ಟಾ ಮಾಡಿರುವ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ವೆಂಕಟೇಶ್, ಕಳೆದ ಎರಡು ವಾರಗಳಿಂದ ಬೆಳಗಿನ ಜಾವ 5 ರಿಂದ 7  ಅವಧಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ಈ ದಿಢೀರ್ ಕಾರ್ಯಾಚರಣೆಯಿಂದಾಗಿ ಮುಂಜಾನೆ ಹೊತ್ತಿನಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತರಕಾರಿ ಮತ್ತು ಹಾಲು ಸರಬರಾಜು ಮಾಡುವವರಿಗೆ ದಿಕ್ಕು ತೋಚದಂತಾಗಿದೆ. ಮುಖ್ಯ ಅಧಿಕಾರಿಗಳ ಈ ಕ್ರಮ ಸಾರ್ವಜನಿಕರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಮುಖ್ಯ ಅಧಿಕಾರಿಗಳನ್ನು ಒಳಗೊಂಡ ಪಟ್ಟಣ ಪಂಚಾಯಿತಿ ಅಧಿಕಾರಿಗಳ ತಂಡ ಪ್ರತಿ ಅಂಗಡಿಗೂ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಅರಿವು ಮೂಡಿಸಿ, ಪ್ಲಾಸ್ಟಿಕ್ ಅನ್ನು ಸೀಲ್ ಮಾಡಿ ಸ್ಥಳದಲ್ಲೇ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತಿದ್ದಾರೆ. ಇದುವರೆಗೂ ಸುಮಾರು 50 ಕಿಲೋಗ್ರಾಂಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಹೋಟೆಲ್‌ಗಳಲ್ಲಿ ಬಿಸಿಬಿಸಿಯಾದ ಇಡ್ಲಿ, ದೋಸೆ, ವಿವಿಧ ತಿಂಡಿಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಟ್ಟಿಕೊಡುತ್ತಾರೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಪ್ಲಾಸ್ಟಿಕ್ ನಿಷೇಧದ ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ಕಳೆದ ಎರಡು ದಿನಗಳಿಂದ ಹೋಟಲ್‌ಗಳಲ್ಲಿ ಸಾಂಪ್ರದಾಯಿಕ ಬಾಳೆ ಎಲೆಯಲ್ಲಿ ತಿಂಡಿ ಪಾರ್ಸಲ್ ಕಟ್ಟಿಕೊಡುತ್ತಿದ್ದಾರೆ.

ತಪಾಸಣೆ ವೇಳೆ ಕಿಲೋಗ್ರಾಂಗಟ್ಟಲೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಪತ್ತೆಯಾದ ಅಂಗಡಿ ಮಾಲೀಕರಿಗೆ ಸಿಕ್ಕ ಪ್ಲಾಸ್ಟಿಕ್‌ಗೆ ಅನುಗುಣವಾಗಿ ಸ್ಥಳದಲ್ಲೇ ₹500, ₹5,000ವರೆಗೆ ದಂಡ ವಿಧಿಸಲಾಗುತ್ತಿದೆ. ಕೇವಲ ಸಣ್ಣ ಅಂಗಡಿಗಳಲ್ಲದೆ ಪ್ಲಾಸ್ಟಿಕ್ ಪೂರೈಕೆ ಮಾಡುವ ಸಗಟು ವ್ಯಾಪಾರಿಗಳ ಗೋದಾಮು ಮೇಲೆಯೂ ಅಧಿಕಾರಿಗಳು ನಿರಂತರ ನಿಗಾ ಇಟ್ಟಿದ್ದಾರೆ.

ಮಳೆಗಾಲದಲ್ಲಿ ಪ್ಲಾಸ್ಟಿಕ್ ಕಸದಿಂದ ಚರಂಡಿ ತುಂಬಿ ಹರಿಯುತ್ತಿರುವುದನ್ನು ಗಮನಿಸಿದ ಪಟ್ಟಣ ಪಂಚಾಯಿತಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಈ ಕಠಿಣ ಹೆಜ್ಜೆ ಇಟ್ಟಿದೆ. ಅಧಿಕಾರಿಗಳ ಈ ನಿರಂತರ ದಾಳಿಯ ಪರಿಣಾಮ ಪಟ್ಟಣದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ. ಪಟ್ಟಣದ ಪ್ರಮುಖ ಹೋಟೆಲ್ ಮತ್ತು ಬೇಕರಿಗಳಲ್ಲಿ ಪಾರ್ಸಲ್ ನೀಡಲು ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಚೀಲ ಅಥವಾ ಪೇಪರ್ ಕವರ್‌ ಬಳಸಲು ಆರಂಭಿಸಿದ್ದಾರೆ. ಸಾರ್ವಜನಿಕರು ಕೂಡ ಮನೆಯಿಂದ ಹೊರ ಬರುವಾಗ ಬಟ್ಟೆ ಚೀಲಗಳನ್ನು ತರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

‘ನಾವು ಕೇವಲ ದಂಡ ಹಾಕುವುದಕ್ಕೆ ಈ ಕಾರ್ಯಾಚರಣೆ ಮಾಡುತ್ತಿಲ್ಲ. ಪ್ಲಾಸ್ಟಿಕ್‌ನಿಂದ ಪಟ್ಟಣದ ಮಣ್ಣು ಮತ್ತು ನೀರು ಹಾಳಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಎಚ್ಚೆತ್ತುಕೊಳ್ಳಬೇಕು. ವ್ಯಾಪಾರಿಗಳು ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ಪಣ ತೊಡಬೇಕು. ಈ ಕಾರ್ಯಾಚರಣೆ ಕೇವಲ ಸ್ವಲ್ಪ ದಿನಗಳಲ್ಲೇ ಕೊನೆಯಾಗುವುದಿಲ್ಲ. ಇದು ನಿರಂತರವಾಗಿ ಮುಂದುವರಿಯುತ್ತದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ತಿಳಿಸಿದರು. 

‘ಹಿಂದಿನ ಕಾಲದಲ್ಲಿ ಬಾಳೆ ಎಲೆಯಲ್ಲಿ ಊಟ ಕಟ್ಟಿಕೊಡುತ್ತಿದ್ದರು. ಕಾಲ ಬದಲಾದಂತೆ ಪ್ಲಾಸ್ಟಿಕ್ ಪೇಪರ್‌ನಲ್ಲಿ ಆಹಾರ ಕಟ್ಟಿಕೊಡುವುದು ಬಳಕೆಗೆ ಬಂತು. ಇದರಿಂದ ಮನುಷ್ಯನಿಗೆ ಕ್ಯಾನ್ಸರ್ ಮತ್ತು ಇನ್ನಿತರ ಹೃದಯ ಕಾಯಿಲೆಗಳು ಬರುವುದು ಹೆಚ್ಚಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕ್ರಮದಿಂದ ಈಗ ಮತ್ತೆ ಬಾಳೆ ಎಲೆಯಲ್ಲಿ ಊಟ ಕಟ್ಟಿಕೊಡುವುದು ಶುರುವಾಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ ಪೀಳಿಗೆ ಮೊಮ್ಮಕ್ಕಳು ಆರೋಗ್ಯವಂತರಾಗಿರುತ್ತಾರೆ’ ಎಂದು 90 ವರ್ಷದ ಹಿರಿಯ ನಾಗರಿಕ ಭೈರಪ್ಪ, ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.