ಕೋಲಾರ: ಕೇಂದ್ರ ಸರ್ಕಾರದ ಮೋಟಾರು ಕಾಯ್ದೆ ಕರಡು ನೀತಿ ವಿರೋಧಿಸಿ ಜಿಲ್ಲಾ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘದ ಸದಸ್ಯರು ಸೋಮವಾರ ಶಾಲೆಗಳನ್ನು ಬಂದ್ ಮಾಡಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಡ್ರೈವಿಂಗ್ ಶಾಲೆಗಳ ಕಲಿಕಾ ವಾಹನಗಳನ್ನು ಆರ್‌ಟಿಒ ಕಚೇರಿ ಮುಂಭಾಗದಲ್ಲಿ ನಿಲ್ಲಿಸಿದ ಪ್ರತಿಭಟನಾಕಾರರು, ‘ಮೋಟಾರು ಕಾಯ್ದೆ ಕರಡು ನೀತಿಯು ಡ್ರೈವಿಂಗ್ ಶಾಲೆಗಳಿಗೆ ಮಾರಕವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೇಂದ್ರ ಸರ್ಕಾರವು ಅಕ್ರಿಡೇಟೆಡ್ ಡ್ರೈವರ್ ಟ್ರೈನಿಂಗ್ ಸೆಂಟರ್‌ಗಳನ್ನು ಆರಂಭಿಸಲು 2021ರ ಜ.29ರಂದು ಅಧಿಸೂಚನೆ ಹೊರಡಿಸಿದೆ. ಕರಡು ನೀತಿ ಸೂಚನೆ ಅನ್ವಯ ಒಂದು ಡ್ರೈವಿಂಗ್ ಶಾಲೆ ಆರಂಭಿಸಲು ಸುಮಾರು ₹ 3 ಕೋಟಿ ವೆಚ್ಚವಾಗಲಿದ್ದು, ಶಾಲೆಗೆ ಕನಿಷ್ಠ 2 ಎಕರೆ ಜಮೀನು ಬೇಕಾಗುತ್ತದೆ’ ಎಂದು ರಾಜ್ಯ ಡ್ರೈವಿಂಗ್ ಶಾಲಾ ಮಾಲೀಕರ ಒಕ್ಕೂಟದ ಉಪಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಹೇಳಿದರು.
‘ಡಿಜಿಟಲ್ ಶಾಲೆ ನಿರ್ಮಾಣ ಮಾಡಬೇಕಿದ್ದು, ಇದರಿಂದ ಪ್ರಸ್ತುತ ವಾಣಿಜ್ಯ ವಾಹನಗಳನ್ನು ಚಲಾಯಿಸುತ್ತಿರುವ ಅನಕ್ಷರಸ್ಥ ಚಾಲಕರಿಗೆ ಕಂಪ್ಯೂಟರ್ ಜ್ಞಾನವಿಲ್ಲದೆ ಚಾಲನಾ ಪರವಾನಗಿ ಪಡೆದುಕೊಳ್ಳಲು ಕಷ್ಟವಾಗುತ್ತದೆ. ಈಗಾಗಲೇ ಡ್ರೈವಿಂಗ್ ಶಾಲೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಿಬ್ಬಂದಿ ಮತ್ತು ಮಾಲೀಕರಿಗೆ ತೊಂದರೆಯಾಗುತ್ತದೆ. ಇವರೆಲ್ಲರೂ ಬೀದಿ ಪಾಲಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
ಶುಲ್ಕ ದುಬಾರಿ: ‘ಚಾಲನಾ ಪರವಾನಗಿ (ಡಿ.ಎಲ್) ಸೇವಾ ಶುಲ್ಕ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿದೆ. ದಿನದಿಂದ ದಿನಕ್ಕೆ ತೈಲೋತ್ಪನ್ನಗಳ ಬೆಲೆ ಗಗನಕ್ಕೇರುತ್ತಿದ್ದು, ಚಾಲನಾ ತರಬೇತಿ ವಹಿವಾಟು ಮುಂದುವರಿಸುವುದು ಕಷ್ಟವಾಗಿದೆ. ಸರ್ಕಾರಕ್ಕೆ ಜನಪರ ಕಾಳಜಿಯಿಲ್ಲ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
‘ಕೇಂದ್ರವು ಚಾಲನಾ ಪರವಾನಗಿ ಹಾಗೂ ಇತರೆ ಸೇವೆಗಳನ್ನು ಎಟಿಡಿಸಿಗೆ ಕೇಂದ್ರೀಕರಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಈ ಧೋರಣೆ ಕೈಬಿಟ್ಟು ಡ್ರೈವಿಂಗ್ ಶಾಲೆಗಳ ಮೂಲಕವೇ ಮಾಡಿಸಿಕೊಳ್ಳುವ ಹಿಂದಿನ ಪದ್ಧತಿಯನ್ನೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.
ಬಳಿಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್, ಪ್ರಧಾನ ಕಾರ್ಯದರ್ಶಿ ಬೈಚೇಗೌಡ, ಕಾರ್ಯದರ್ಶಿ ಎ.ಚಿದಂಬರಂ, ಖಜಾಂಚಿ ಷೇಕ್ ಜಮೀರ್, ಜಂಟಿ ಕಾರ್ಯದರ್ಶಿ ಎಸ್.ಎಂ.ಮುನಿನಾರಾಯಣ, ಸದಸ್ಯರಾದ ಬಸವರಾಜ್, ಎನ್.ಮೋಹನ್‌ಬಾಬು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.