ADVERTISEMENT

ಮಡಿವಾಳ ಸಮುದಾಯದ ಜನ ಸಂಘಟಿತರಾಗಿ- ಸಂಘದ ಅಧ್ಯಕ್ಷ ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 15:40 IST
Last Updated 30 ಮಾರ್ಚ್ 2022, 15:40 IST
ಜಿಲ್ಲಾ ಮಡಿವಾಳ ಸಂಘವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಉಚಿತ ಪ್ರವೇಶ ಪಡೆದ ವಿದ್ಯಾರ್ಥಿ ವೇಣುಗೋಪಾಲ್‌ರ ಪೋಷಕರಿಗೆ ಹಣಕಾಸು ನೆರವಿನ ಚೆಕ್‌ ವಿತರಿಸಲಾಯಿತು
ಜಿಲ್ಲಾ ಮಡಿವಾಳ ಸಂಘವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಉಚಿತ ಪ್ರವೇಶ ಪಡೆದ ವಿದ್ಯಾರ್ಥಿ ವೇಣುಗೋಪಾಲ್‌ರ ಪೋಷಕರಿಗೆ ಹಣಕಾಸು ನೆರವಿನ ಚೆಕ್‌ ವಿತರಿಸಲಾಯಿತು   

ಕೋಲಾರ: ‘ಮಡಿವಾಳ ಸಮಾಜದ ಸಂಘಟನೆ ಇತ್ತೀಚೆಗೆ ಬಲಗೊಳ್ಳುತ್ತಿದೆ. ಸಮುದಾಯದ ಜನರು ಸಂಘಟಿತರಾದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ರಾಜ್ಯ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆರ್.ಪ್ರಕಾಶ್ ಕಿವಿಮಾತು ಹೇಳಿದರು.

ಜಿಲ್ಲಾ ಮಡಿವಾಳ ಸಂಘವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಣ್ಣ ಸಮುದಾಯವಾದ ಮಡಿವಾಳ ಜನಾಂಗವು ತೀರಾ ಹಿಂದುಳಿದಿದೆ. ಯಾವುದೇ ಸಮುದಾಯದವರು ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಬಹುದು. ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು. ಕಲಿಕೆಗೆ ಕೊನೆಯಿಲ್ಲ. ಮಕ್ಕಳಿಗೆ ಆಸಕ್ತಿ ಇರುವವರೆಗೂ ಶಿಕ್ಷಣ ಕೊಡಿಸಬೇಕು’ ಎಂದು ತಿಳಿಸಿದರು.

‘ಮಡಿವಾಳ ಸಮುದಾಯ ಶ್ರೇಷ್ಠ ಸಮಾಜವಾಗಿದೆ. ಸಮುದಾಯದ ಮಹನೀಯ ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು. ಮಡಿವಾಳ ಮಾಚಿದೇವ, ಬಸವಣ್ಣ ಸೇರಿದಂತೆ ವಚನಕಾರರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸೃಷ್ಟಿಸಿದರು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಡಿವಾಳ ಸಮುದಾಯ ಅಭಿವೃದ್ಧಿ ಆಗಬೇಕಾದರೆ ಮೊದಲು ಜನಾಂಗದ ಮಕ್ಕಳು ಸುಶಿಕ್ಷಿತರಾಗಬೇಕು. ಈ ನಿಟ್ಟಿನಲ್ಲಿ ಸಮಾಜದಲ್ಲಿನ ಆರ್ಥಿಕ ಸ್ಥಿತಿವಂತರು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಣಕಾಸು ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಬೃಹತ್‌ ಸಮಾವೇಶ: ‘ಸಮುದಾಯ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸುತ್ತಿದೆ. ಅನ್ನಪೂರ್ಣಮ್ಮ ಅವರ ವರದಿಯಂತೆ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ತುಮಕೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಜಿಲ್ಲೆಯಲ್ಲಿನ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್ ಕೋರಿದರು.

ವೈದ್ಯಕೀಯ ಶಿಕ್ಷಣಕ್ಕೆ ಉಚಿತ ಪ್ರವೇಶ ಪಡೆದ ಶ್ರೀನಿವಾಸಪುರ ತಾಲ್ಲೂಕಿನ ವಿದ್ಯಾರ್ಥಿ ವೇಣುಗೋಪಾಲ್‌ ಅವರಿಗೆ ಆರ್ಥಿಕ ನೆರವಿನ ಚೆಕ್‌ ನೀಡಲಾಯಿತು. ರಾಜ್ಯ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್, ಜಿಲ್ಲಾ ಮಡಿವಾಳ ಸಂಘದ ಕಾರ್ಯಾಧ್ಯಕ್ಷ ಎಲ್.ಮುರಳಿಮೋಹನ್, ಉಪಾಧ್ಯಕ್ಷ ಎನ್.ರಮೇಶ್‌ಬಾಬು, ಜಿಲ್ಲಾ ಮಡಿವಾಳ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ನಾಗರಾಜ್, ಖಜಾಂಚಿ ಅಮರನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.