ADVERTISEMENT

ಕನ್ನಡತನ ಗಟ್ಟಿಗೊಳಿಸಲು ಸಂಘಟಿತ ಹೋರಾಟ

ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 13:02 IST
Last Updated 18 ಅಕ್ಟೋಬರ್ 2019, 13:02 IST
ವಿಶ್ವಮಾನವ ಕುವೆಂಪು ಪ್ರತಿಷ್ಠಾನವು ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿ.ಗೀತಾ ಹಾಗೂ ಅ.ಕೃ.ಸೋಮಶೇಖರ್‌ ಅವರಿಗೆ ಕುವೆಂಪು ಅನಿಕೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಿಶ್ವಮಾನವ ಕುವೆಂಪು ಪ್ರತಿಷ್ಠಾನವು ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿ.ಗೀತಾ ಹಾಗೂ ಅ.ಕೃ.ಸೋಮಶೇಖರ್‌ ಅವರಿಗೆ ಕುವೆಂಪು ಅನಿಕೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.   

ಕೋಲಾರ: ‘ಕನ್ನಡತನ ಗಟ್ಟಿಗೊಳಿಸಲು ಹಾಗೂ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಕನ್ನಡಿಗರು ಸಂಘಟಿತರಾಗಿ ಹೋರಾಟ ನಡೆಸಬೇಕು’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.

ವಿಶ್ವಮಾನವ ಕುವೆಂಪು ಪ್ರತಿಷ್ಠಾನವು ಆಯೋಜಿಸಿದ್ದ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘ಕನ್ನಡತನ ಬೆಳೆಸಿಕೊಳ್ಳುವ ಮೂಲಕ ನಮ್ಮತನ ಉಳಿಸಿಕೊಳ್ಳಬೇಕು. ರಾಷ್ಟ್ರದಲ್ಲಿ ಹಿಂದಿ ಭಾಷೆಗೆ ನೀಡಿರುವ ಆದ್ಯತೆಯು ರಾಜ್ಯದಲ್ಲಿ ಕನ್ನಡ ಭಾಷೆಗೆ ಸಿಗುವಂತಾಗಬೇಕು’ ಎಂದರು.

‘25 ವರ್ಷಗಳ ಹಿಂದೆ ಪ್ರಶಸ್ತಿ, ಸನ್ಮಾನಗಳಿಗೆ ಹೆಚ್ಚಿನ ಗೌರವವಿತ್ತು. ಪ್ರಶಸ್ತಿಗೆ ಪಾತ್ರರಾದ ಅನೇಕರು ಸಮಾಜದಲ್ಲಿ ಗುರುತಿಸಿಕೊಳ್ಳಲಾಗದೆ ನಲುಗಿ ಹೋಗಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಂಘ, ಸಂಸ್ಥೆಗಳು ಪ್ರತಿಭಾವಂತರು ಹಾಗೂ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಪ್ರಶಸ್ತಿ ನೀಡುವುದಕ್ಕೂ ಮತ್ತು ಪಡೆಯುವುದಕ್ಕೂ ಅರ್ಹತೆ ಇರಬೇಕು. ಆರ್ಹತೆ ಇಲ್ಲದವರು ನೀಡಿದರೆ, ಆರ್ಹತೆ ಇಲ್ಲದವರು ಪಡೆದರೆ ಪ್ರಶಸ್ತಿಗೆ ಗೌರವ ಇರುವುದಿಲ್ಲ. ಅಂಬೇಡ್ಕರ್‌ರ ಮೂಲ ಮಂತ್ರವಾದ ಶಿಕ್ಷಣ, ಸಂಘಟನೆ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ದಲಿತರು, ಬಡವರ ಪರ ಹೋರಾಟ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಸುಮಾರು 2 ದಶಕದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಅವರನ್ನು ಗುರುತಿಸಿ ಕುವೆಂಪು ಅನಿಕೇತನ ಪ್ರಶಸ್ತಿ ನೀಡಿರುವುದು ಶ್ಲಾಘನೀಯ. ಗಡಿ ಭಾಗದ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ತಮಿಳು ಪ್ರಭಾವ ಹೆಚ್ಚಿದೆ. ಆ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಕನ್ನಡಿಗರನ್ನು ಸಂಘಟಿಸಿ ಕನ್ನಡಪರವಾಗಿ ದುಡಿದ ಅ.ಕೃ.ಸೋಮಶೇಖರ್ ಅವರಿಗೂ ಪ್ರಶಸ್ತಿ ನೀಡಿರುವುದು ಸಂತಸದ ವಿಷಯ’ ಎಂದರು.

ಸಮಾಜ ಸೇವೆ: ‘ವಿಶ್ವಮಾನವ ಕುವೆಂಪು ಪ್ರತಿಷ್ಠಾನವು ಕನ್ನಡಪರ ಚಟುವಟಿಕೆ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ಆಗಾಗ್ಗೆ ನಡೆಸುತ್ತಿದೆ. ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸಬಹುದು’ ಎಂದು ರಾಜ್ಯ ಸರಕು ಮಾರಾಟ ಮತ್ತು ಖರೀದಿದಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು ಹೇಳಿದರು.

‘ಕವಿ ಕುವೆಂಪು ಕಾವ್ಯ, ನಾಟಕ, ವಿಮರ್ಶೆ, ಕಾದಂಬರಿ, ಮಹಾಕಾವ್ಯ ಹೀಗೆ ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಕೊಡುಗೆ ನೀಡಿದ್ದಾರೆ. ಕುವೆಂಪು ಬರಹಗಾರರ ವಲಯ ಮೀರಿ ಜನಸಾಮಾನ್ಯರ ಅಂತರಂಗ ತಟ್ಟಿದವರು. ಜನಸಾಮಾನ್ಯರನ್ನು ಸಾಹಿತ್ಯದ ಒಳಗೆ ಪ್ರವೇಶಿಸುವಂತಹ ನೆಲೆಗಟ್ಟನ್ನು ಒದಗಿಸಿಕೊಟ್ಟಿದ್ದಾರೆ. ಸಾಮಾನ್ಯ ಜನರನ್ನು ನೇಗಿಲ ಯೋಗಿ ಎಂದು ಕರೆದ ಪ್ರಥಮ ಕವಿ ಕುವೆಂಪು’ ಎಂದು ಬಣ್ಣಿಸಿದರು.

3.50 ಲಕ್ಷ ಸದಸ್ಯರು: ‘ಪ್ರತಿಷ್ಠಾನವು 3 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 3.50 ಲಕ್ಷ ಮಂದಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಮೂಲಕ ಪ್ರತಿಷ್ಠಾನದ ಸದಸ್ಯರಾಗಿದ್ದಾರೆ. ಕನ್ನಡಪರ ಕೆಲಸದ ಜತೆಗೆ ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದೆ. ಕನ್ನಡದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಲಕ್ಕೂರು ನಾಗರಾಜ್ ವಿವರಿಸಿದರು.

ವಿ.ಗೀತಾ, ಬೆಮಲ್ ನಿವೃತ್ತ ಅಧಿಕಾರಿ ಅ.ಕೃ.ಸೋಮಶೇಖರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಮುನಿರತ್ನಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಘವೇಂದ್ರ, ಭುವನೇಶ್ವರಿ ಕನ್ನಡ ಸಂಘದ ಜಿಲ್ಲಾ ಅಧ್ಯಕ್ಷ ತ್ಯಾಗರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.