
ಕೋಲಾರ: ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿ ಶಾಲೆಯಿಂದ ಹೊರಗುಳಿಯಬಾರದು. ವಿವಿಧ ಕಾರಣಗಳಿಂದ ಶಾಲೆಗಳಿಗೆ ಹೋಗದೆ ಕೆಲಸಕ್ಕೆ ಹೋಗುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ಸೇರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಪ್ರವೀಣ್ ಪಿ.ಬಾಗೇವಾಡಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಶಿಕ್ಷಣ ಹಾಗೂ ಇತರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಯಾವುದೇ ಇಲಾಖೆಯ ಅಧಿಕಾರಿಗಳು ವಿದ್ಯಾಭ್ಯಾಸದಿಂದ ಹೊರಗಿರುವ ಮಕ್ಕಳನ್ನು ಗಮನಿಸಿದರೆ ಅವರನ್ನು ಸ್ಥಳೀಯ ಶಾಲೆಗಳಿಗೆ ಸೇರಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅರಿವು ಮೂಡಿಸುವ ಕೆಲವ ಮಾಡಬೇಕು ಎಂದರು.
ಅನೇಕ ಮಕ್ಕಳು ಶಾಲೆಯಿಂದ ಹೊರಗುಳಿದು ಪೋಷಕರ ಒತ್ತಡದಿಂದ ಕೂಲಿಗೆ ಹೋಗುತ್ತಿರುತ್ತಾರೆ. ಏಕ ಪೋಷಕರು ಇರುವವರು ಕುಟುಂಬ ನಿರ್ವಹಣೆಗಾಗಿ ದುಡಿಯುತ್ತಿರುತ್ತಾರೆ. ಅವರಿಗೆ ಸೂಕ್ತ ಪರಿಹಾರ ಒದಗಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಒಂದಾಗಿ ಕೆಲಸ ಮಾಡಿಬೇಕು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಶೀಘ್ರದಲ್ಲಿಯೇ ನವೀಕರಣ ಮಾಡಿಸಲಾಗುವುದು ಎಂದರು.
ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ರಕ್ಷಣಾ ಘಟಕವು ಈ ವರ್ಷ 57 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಪತ್ತೆ ಹಚ್ಚಿವೆ. ಅವರನ್ನು ಶಾಲೆಗೆ ಸೇರಿಸಿ ಶಿಕ್ಷಣ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರತ್ನ ಮಾತನಾಡಿ, ವಿವಿಧ ಕಾರಣಗಳಿಂದ ವಿದ್ಯಾಭ್ಯಾಸದಿಂದ ಹೊರಗುಳಿದಿರುವ ಮಕ್ಕಳ ಪೋಷಕರಿಗೆ ಪ್ರತಿ ತಿಂಗಳು ₹ 4 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಮಾತನಾಡಿ, ‘ಮನೆಯ ಪರಿಸ್ಥಿತಿ ಸರಿಯಿಲ್ಲದ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಮೈಲಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗೀತಮ್ಮ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಚಾರಿಣಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಮಂಜುಳಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಪರ್ವೀನ್ ತಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ನ.14 ರಂದು ಪ್ರತಿ ಶಾಲೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆ ನಡೆಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ತಪ್ಪದೆ ಪಾಲ್ಗೊಳ್ಳಬೇಕುಡಾ.ಪ್ರವೀಣ್ ಪಿ.ಬಾಗೇವಾಡಿ ಜಿ.ಪಂ ಸಿಇಒ
ಶಿಕ್ಷಣದಿಂದ ಹೊರಗುಳಿದವರ ಸಮೀಕ್ಷೆ ನಡೆಸಿ
ಜಿಲ್ಲೆಯಲ್ಲಿ ಸ್ಥಳೀಯ ಶಿಕ್ಷಕರು ಆಶಾ ಕಾಯಕರ್ತೆಯರು ಮನೆಮನೆಗೆ ಭೇಟಿ ನೀಡಿ ವಿದ್ಯಾಭ್ಯಾಸದಿಂದ ಯಾರಾದರೂ ಹೊರಗೆ ಉಳಿದಿದ್ದಾರೆಯೇ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡಬೇಕು. ಗ್ರಾಮೀಣ ಭಾಗದಲ್ಲಿ ಶಿಕ್ಷಕರು ಸಮುದಾಯದ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ ಪೋಷಕರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರೇರೇಪಿಸಬೇಕು ಎಂದು ಪ್ರವೀಣ್ ಪಿ.ಬಾಗೇವಾಡಿ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.