ADVERTISEMENT

ಕನ್ನಡ ರಾಜ್ಯೋತ್ಸವದಲ್ಲಿ ಪಲ್ಲಕ್ಕಿ ಮೆರುಗು

ಮೆರವಣಿಗೆ ಉದ್ದಕ್ಕೂ ಕುಣಿದು ಸಂಭ್ರಮಿಸಿದ ಕನ್ನಡಪರ ಸಂಘಟನೆಗಳ ಸದಸ್ಯರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:28 IST
Last Updated 1 ನವೆಂಬರ್ 2019, 15:28 IST
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭುವನೇಶ್ವರಿ ದೇವಿಯ ಪಲ್ಲಕ್ಕಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಡೊಳ್ಳು ಬಾರಿಸಿ ಚಾಲನೆ ನೀಡಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭುವನೇಶ್ವರಿ ದೇವಿಯ ಪಲ್ಲಕ್ಕಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಡೊಳ್ಳು ಬಾರಿಸಿ ಚಾಲನೆ ನೀಡಿದರು.   

ಕೋಲಾರ: ನಗರದಲ್ಲಿ ಶುಕ್ರವಾರ ಅದ್ಧೂರಿಯಾಗಿ ನಡೆದ 64ನೇ ಕನ್ನಡ ರಾಜ್ಯೋತ್ಸವಕ್ಕೆ ‘ಕೋಲಾರ ದಸರಾ’ ಎಂದೇ ಖ್ಯಾತಿಯಾದ ಪಲ್ಲಕ್ಕಿ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆಯು ವಿಶೇಷ ಮೆರುಗು ನೀಡಿತು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿದರು. ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಬಳಿಕ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆ, ಭುವನೇಶ್ವರಿ ದೇವಿಯ ಭಾವಚಿತ್ರ ಹೊತ್ತ ಪಲ್ಲಕ್ಕಿಗಳು, ಜಾನಪದ ಕಲಾ ತಂಡಗಳ ಪ್ರದರ್ಶನವು ಜನರ ಮನಸೊರೆಗೊಂಡಿತು. ಗಾಂಧಿವನ ಬಳಿಯಿಂದ ಆರಂಭವಾದ ಮೆರವಣಿಗೆಯು ಎಂ.ಜಿ.ರಸ್ತೆ, ಅಮ್ಮವಾರಿಪೇಟೆ, ಎಂ.ಬಿ.ರಸ್ತೆ, ಮೆಕ್ಕೆ ವೃತ್ತದ ಮಾರ್ಗವಾಗಿ ಸಾಗಿ ಟಿ.ಚನ್ನಯ್ಯ ರಂಗಮಂದಿರದ ಬಳಿ ಅಂತ್ಯಗೊಂಡಿತು.

ADVERTISEMENT

ವೀರಗಾಸೆ, ಡೊಳ್ಳು ಕುಣಿತ, ತಮಟೆ, ಡೋಲು, ಕೀಲುಕುದುರೆ, ಕೋಲಾಟ, ಗಾರುಡಿ ಗೊಂಬೆ ಕಲಾವಿದರು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದರು. ಗಣ್ಯರು ಹಾಗೂ ಅಧಿಕಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕನ್ನಡಪರ ಸಂಘಟನೆಗಳ ಸದಸ್ಯರು ಹಾಗೂ ಯುವಕರು ಮೆರವಣಿಗೆ ಉದ್ದಕ್ಕೂ ಕುಣಿದು ಸಂಭ್ರಮಿಸಿದರು. ಕನ್ನಡ ನಾಡು, ನುಡಿಯ ವೈವಿಧ್ಯತೆ ಸಾರುವ ಗೀತೆಗಳು ಮೆರವಣಿಗೆಯನ್ನು ಅರ್ಥಪೂರ್ಣಗೊಳಿಸಿದವು.

ಕೆಎಸ್‌ಆರ್‌ಟಿಸಿ, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯು ಸಿದ್ಧಪಡಿಸಿದ್ದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸಿದ್ಧಪಡಿಸಿದ್ದ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಮತ್ತು ಜಿಲ್ಲೆಯ ಸಾಹಿತಿಗಳ ಮಾಹಿತಿಯುಳ್ಳ ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು. ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು.

ಯುವಕರು ನಾಡಧ್ವಜ ಹಿಡಿದು ಕರ್ನಾಟಕದ ಪರ ಘೋಷಣೆ ಕೂಗಿದರು. ರಸ್ತೆಗಳ ಇಕ್ಕೆಲದಲ್ಲಿ ನಾಡ ಧ್ವಜಗಳು ರಾರಾಜಿಸುತ್ತಿದ್ದವು. ಶಾಲಾ ಮಕ್ಕಳು ರಾಜ್ಯದ ರಾಜ ಮಹಾರಾಜರು, ಹೋರಾಟಗಾರರು, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಒಬವ್ವ ಸೇರಿಂದ ಹಲವು ಮಹನೀಯರ ವೇಷಧಾರಿಗಳಾಗಿ ಗಮನ ಸೆಳೆದರು. ಕರಾಟೆ ಪಟುಗಳು ಕರಾಟೆ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.