ADVERTISEMENT

ಪಕ್ಷ ದ್ರೋಹವು ದೊಡ್ಡ ವಂಚನೆ: ಮುಬಾರಕ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 13:26 IST
Last Updated 16 ಏಪ್ರಿಲ್ 2019, 13:26 IST

ಕೋಲಾರ: ‘ಬಿಜೆಪಿ ಅಭ್ಯರ್ಥಿಯ ಬೆನ್ನಿಗೆ ನಿಂತಿರುವ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪರ ವಿರುದ್ಧ ಅಪಪ್ರಚಾರ ಮಾಡುತ್ತಾ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಂಜುನಾಥ್‌ ಅವರಿಗೆ ತಾಕತ್ತಿದ್ದರೆ ಮುನಿಯಪ್ಪರ ಎದುರಿಗೆ ಬಂದು ಮಾತನಾಡಲಿ. ಶಾಸಕ ಶ್ರೀನಿವಾಸಗೌಡರು ಸೇರಿದಂತೆ ಯಾರೇ ಪಕ್ಷ ವಿರೋಧಿ ಚಟುವಟಿಕೆನಡೆಸಿದರೂ ಪಕ್ಷ ದ್ರೋಹಿಗಳಾಗುತ್ತಾರೆ’ ಎಂದರು.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ಮೈತ್ರಿ ಅಭ್ಯರ್ಥಿ ಘೋಷಿಸಿದ ಬಳಿಕ ಈ ರೀತಿ ಪಕ್ಷಕ್ಕೆ ದ್ರೋಹ ಬಗೆಯುವುದಕ್ಕಿಂತ ದೊಡ್ಡ ವಂಚನೆ ಮತ್ತೊಂದಿಲ್ಲ. ಭಿನ್ನಮತೀಯರಿಗೆ ಅಸಮಾಧಾನವಿದ್ದರೆ ವರಿಷ್ಠರ ಎದುರು ಬಹಿರಂಗವಾಗಿ ಮಾತನಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಪಕ್ಷದ ತತ್ವ ಸಿದ್ಧಾಂತ ಮರೆತು ವಿರೋಧ ಮಾಡಿದರೆ ಮುನಿಯಪ್ಪಗೆ ಮೋಸ ಮಾಡಿದಂತಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿಯ ಕತ್ತುಕೊಯ್ದು, ಬೆನ್ನಿಗೆ ಚೂರಿ ಹಾಕಿದಂತೆ. ಇಂತಹವರು ಪಕ್ಷದ ವರಿಷ್ಠರ ಹೆಸರು ಹೇಳುವುದಕ್ಕೂ ನಾಲಾಯಕ್’ ಎಂದು ಕಿಡಿಕಾರಿದರು.

‘ಎಲ್ಲೆಡೆ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷ ನೋಡಿ ಮತ ಹಾಕಿದ್ದಾರೆ. ಅಲ್ಪಸಂಖ್ಯಾತರು ನಿಮ್ಮನ್ನು ನಂಬಿದ್ದಕ್ಕೆ ಕೋಮುವಾದಿ ಬಿಜೆಪಿಗೆ ಬೆಂಬಲ ನೀಡುತ್ತಿರುವುದು ಸರಿಯೇ?’ ಎಂದು ಮುನಿಯಪ್ಪರ ವಿರೋಧಿ ಬಣವನ್ನು ಪ್ರಶ್ನಿಸಿದರು.

ಪಕ್ಷ ಬಿಟ್ಟು ಹೋಗಲಿ: ‘ಶ್ರೀನಿವಾಸಗೌಡರು ಇದ್ದಾಗಲೂ ನಾವು ಜೆಡಿಎಸ್‌ನಲ್ಲೇ ಇದ್ದೆವು, ಇಲ್ಲದಾಗಲೂ ಅದೇ ಪಕ್ಷದಲ್ಲಿದ್ದೇವೆ. ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪಕ್ಷದ ಆದೇಶ ಪಾಲನೆ ಮಾಡಲು ಸಾಧ್ಯವಾಗದಿದ್ದರೆ ಪಕ್ಷ ಬಿಟ್ಟು ಹೋಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಭಿನ್ನಾಭಿಪ್ರಾಯವಿದ್ದರೆ ನಾಲ್ಕು ಗೋಡೆ ಮಧ್ಯೆ ಬಡಿದಾಡಿಕೊಳ್ಳಲಿ. ಇಲ್ಲವೇ ಮುನಿಯಪ್ಪಗೆ ಟಿಕೆಟ್ ಕೊಡದಂತೆ ವರಿಷ್ಠರ ಮೇಲೆ ಒತ್ತಡ ಹೇರಬೇಕಿತ್ತು. ಎಲ್ಲವೂ ಮುಗಿದ ನಂತರ ಸಾರ್ವಜನಿಕವಾಗಿ ಅಭ್ಯರ್ಥಿಗೆ ತೊಂದರೆ ಮಾಡುವುದು ಸರಿಯಲ್ಲ. ಬುದ್ಧಿವಂತರಾದ ಜನ ಮುಂದೆ ಸುಮ್ಮನೆ ಇರುವುದಿಲ್ಲ’ ಎಂದು ಎಚ್ಚರಿಸಿದರು.

ಶೋಭೆ ತರುವುದಿಲ್ಲ: ‘ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯ ಹಾಲಿ, ಮಾಜಿ ಶಾಸಕರ ಶ್ರಮವೂ ಇದೆ. ಆದರೆ, ತಾವೊಬ್ಬರೇ ಯೋಜನೆ ಜಾರಿಗೊಳಿಸದಂತೆ ಮಾತನಾಡುವುದು ಸ್ಪೀಕರ್‌ಗೆ ಶೋಭೆ ತರುವುದಿಲ್ಲ. ಹೆತ್ತ ತಾಯಿಯ ನೆನಪು ಅವರೊಬ್ಬರಿಗೆ ಮಾತ್ರ ಬರುತ್ತದೆಯೇ? ಬೇರೆ ಯಾರಿಗೂ ತಾಯಿ ಇಲ್ಲವೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೋಲಾರದಲ್ಲಿ ಶ್ರೀನಿವಾಸಗೌಡರು, ಮಾಲೂರಿನಲ್ಲಿ ಮಂಜುನಾಥಗೌಡ ಮತ್ತು ಒಂದಿಬ್ಬರು ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಬಿಟ್ಟರೆ ಅವಿಭಜಿತ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮಗೂ ಬೆಂಬಲವಿದೆ. ಮೋದಿ ಅಲೆಗೆ ನಮ್ಮ ಸುಂಟರ ಗಾಳಿ ತಕ್ಕ ಉತ್ತರ ನೀಡಲಿದೆ. 1 ಲಕ್ಷ ಮತಗಳ ಅಂತರದಲ್ಲಿ ಮುನಿಯಪ್ಪ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಾಳಿ ಸರಿಯಲ್ಲ: ‘ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಮುಖಂಡರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದು ಸರಿಯಲ್ಲ. ಬಿಜೆಪಿ ಮುಖಂಡರು ನಯಾ ಪೈಸೆ ಖರ್ಚು ಮಾಡದೆ ಚುನಾವಣೆ ಗೆಲ್ಲಲು ಹೊರಟಿದ್ದಾರೆಯೇ? ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮೇಲೆ ಅಲ್ಲಿನ ಜನರಿಗೆ ವಿಶ್ವಾಸ ಬಂದಿದೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ ಅಭಿಪ್ರಾಯಪಟ್ಟರು.

ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.