ADVERTISEMENT

ಚಿನ್ನದ ಗಣಿಯ ನಾಡಿನಲ್ಲಿ ಪೇಜಾವರ ಶ್ರೀಗಳ ನೆನಪು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 20:30 IST
Last Updated 29 ಡಿಸೆಂಬರ್ 2019, 20:30 IST
ಕೋಲಾರಕ್ಕೆ ಗಾಂಧಿನಗರದಲ್ಲಿ ದಲಿತರ ಮನೆಗೆ ಪೇಜಾವರಿ ಶ್ರೀಗಳು ಭೇಟಿ ನೀಡಿದ್ದ ಸಂದರ್ಭ.
ಕೋಲಾರಕ್ಕೆ ಗಾಂಧಿನಗರದಲ್ಲಿ ದಲಿತರ ಮನೆಗೆ ಪೇಜಾವರಿ ಶ್ರೀಗಳು ಭೇಟಿ ನೀಡಿದ್ದ ಸಂದರ್ಭ.   

ಕೋಲಾರ: ಜಿಲ್ಲೆಗೂ ಉಡುಪಿಯ ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿಗೂ ಅವಿನಾಭಾವ ಸಂಭದವಿದೆ. ಜಾತಿ ತಾರತಮ್ಯ ನಿವಾರಿಸಿ ಸಾಮಾಜಿಕ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದ ಅವರ ಹೆಜ್ಜೆ ಗುರುತುಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ.

2014ರ ನವೆಂಬರ್‌ ತಿಂಗಳಲ್ಲಿ ಪೇಜಾವರ ಶ್ರೀಗಳು ನಗರದ ವಿವಿಧ ದಲಿತ ಕಾಲೋನಿಗಳಿಗೆ ಭೇಟಿ ನೀಡಿದ್ದ ನೆನಪು ಶಾಶ್ವತವಾಗಿ ಉಳಿದಿದೆ. ಹಿಂದೆ ದಲಿತ ಕಾಲೋನಿಗಳಿಗೆ ಶ್ರೀಗಳು ಬರಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದವರ ಬಾಯಿ ಮುಚ್ಚಿಸಿದರು.

ನಗರದ ಗಾಂಧಿನಗರ, ಮೋಚಿಪಾಳ್ಯದ ದಲಿತ ಕಾಲೋನಿಗಳಿಗೆ ಶ್ರೀಗಳು ಭೇಟಿ ನೀಡಿದಾಗ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸ್ವಾಮೀಜಿಗಳು ನಮ್ಮ ಮನೆಗೆ ಬರುತ್ತಾರೆಂತೆ, ಇದು ಸಾಧ್ಯವೇ ಎಂಬ ಪ್ರಶ್ನೆಯೊಂದಿಗೆ ಕಾದಿದ್ದ ದಲಿತರ ಮನೆಗೆ ನೇರವಾಗಿ ಪ್ರವೇಶಿಸಿದ ಸ್ವಾಮೀಜಿ ಜನರಲ್ಲಿ ಆಶ್ಚರ್ಯ ಮೂಡಿಸಿದರು.

ADVERTISEMENT

ದಲಿತ ಕೇರಿಗಳಿಗೆ ಶ್ರೀಗಳು ಭೇಟಿ ನೀಡಿ ಹೋದ ನಂತರ ಜಿಲ್ಲೆಯಲ್ಲಿ ಅವರಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹೆಚ್ಚಾದರು. ಕೋಲಾರ ಜಿಲ್ಲೆಯಲ್ಲಿ ಬ್ರಾಹ್ಮಣ ಸಮುದಾಯ ಮಾತ್ರವಲ್ಲದೇ ಅವರನ್ನು ಗುರುಗಳೆಂದು ಭಾವಿಸುವ ಇತರೆ ಸಮುದಾಯದವರು ಇದ್ದಾರೆ.

2006ರಲ್ಲಿ ಆರ್‌ಎಸ್‌ಎಸ್ ಸಂಚಾಲಕ ಗೋಳ್ವಾಲ್ಕರ್ ಅವರ ಜನ್ಮ ಶತಾಬ್ದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಭಕ್ತರೊಬ್ಬರ ಮನೆಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಭಕ್ತರು ಶ್ರೀಗಳ ಪಾದಪೂಜೆಗೆ ಹಾಲು ತಂದಾಗ ಅದನ್ನು ತಿರಸ್ಕರಿಸಿ ಹಾಲು ದೇವರ ಸಮಾನ. ಪೌಷ್ಟಿಕಾಂಶ ಇರುವ ಈ ಹಾಲನ್ನು ಮಕ್ಕಳಿಗೆ ನೀಡಿ ನನಗೆ ಸಂತೃಪ್ತಿ ಸಿಗುತ್ತದೆ ಎಂದು ಹೇಳಿದ ಮಾತು ನೆನಪಿಗೆ ಬರುತ್ತದೆ.

2013ರಲ್ಲಿ ನಗರದಲ್ಲಿ ನಡೆದ ಭಗವದ್ಗೀತಾ ಅಭಿಯಾನದಲ್ಲಿ ಪೇಜಾವರ ಶ್ರೀಗಳು ಪಾಲ್ಗೊಂಡಿದ್ದರು. ಇತ್ತೀಚಿಗೆ ನಗರ ಹೊರವಲಯದ ವುಡ್‌ಲ್ಯಾಂಡ್ ಹೋಟೆಲ್‌ ಉದ್ಘಾಟನಾ ಸಮಾರಂಭಕ್ಕೂ ಆಗಮಿಸಿದ್ದು, ಅವರ ನೆನಪುಗಳು ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ.

ಕೋಲಾರಕ್ಕೂ ಶ್ರೀಗಳಿಗೆ ಅಪಾರ ನಂಟಿದ್ದು, ಇದೀಗ ಶ್ರೀಗಳ ಅಗಲಿಕೆಗೆ ಸಾವಿರಾರು ಮಂದಿ ದುಃಖಿಸಿದ್ದಾರೆ, ಶ್ರದ್ಧಾಂಜಲಿ ಅರ್ಪಿಸಿದ್ದಾರೆ, ಅದರೆ ಅವರ ಚಿಂತನೆಗಳನ್ನು ಕಾರ್ಯಗತ ಮಾಡುವ ಮೂಲಕ ಹಿಂದೂ ಧರ್ಮದ ಉಳಿವಿಗೆ ಸಂಕಲ್ಪ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.