ADVERTISEMENT

ಸೋಂಕು ತಡೆಗೆ ಜನರು ಸಹಕರಿಸಿ

ಕೋವಿಡ್‌–19 ದೊಡ್ದ ಸವಾಲು: ಜಿಲ್ಲಾಧಿಕಾರಿ ಸತ್ಯಭಾಮ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 17:27 IST
Last Updated 24 ಮಾರ್ಚ್ 2020, 17:27 IST
ಸಿ.ಸತ್ಯಭಾಮ
ಸಿ.ಸತ್ಯಭಾಮ   

ಕೋಲಾರ: ‘ಕೊರೊನಾ ಸೋಂಕಿನಿಂದ ಪಾರಾಗುವುದು ದೊಡ್ದ ಸವಾಲಾಗಿದ್ದು, ಜಿಲ್ಲೆಯ ಜನರು ಪರಿಸ್ಥಿತಿಯ ಗಂಭೀರತೆ ಅರಿತು ಸೋಂಕು ತಡೆಗೆ ಸಹಕಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಈವರೆಗೆ ವಿದೇಶ, ಹೊರ ರಾಜ್ಯದಿಂದ ಬಂದ 183 ಮಂದಿಯ ಕಫಾ ಹಾಗೂ ರಕ್ತ ಮಾದರಿ ಪರೀಕ್ಷಿಸಲಾಗಿದೆ. ಆದರೆ, ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಜನ ಭಯಪಡುವ ಅಗತ್ಯವಿಲ್ಲ’ ಎಂದರು.

‘ಕೊರೊನಾ ಸೋಂಕು ತಡೆಗಾಗಿ ಸರ್ಕಾರವು ಇಡೀ ರಾಜ್ಯವನ್ನು ಬಂದ್‌ ಮಾಡಲು ಆದೇಶಿಸಿದೆ. ಅದೇ ರೀತಿ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರ ನಿಷೇಧಿಸಲಾಗಿದೆ. ದಿನ ಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಗೆ ಅವಕಾಶ ನೀಡಲಾಗಿದ್ದು, ಈ ಅವಕಾಶ ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಹೇಳಿದರು.

ADVERTISEMENT

‘ಸಾರ್ವಜನಿಕರು ಮನೆಗಳಲ್ಲೇ ಯುಗಾದಿ ಹಬ್ಬ ಆಚರಣೆ ಮಾಡಬೇಕು. ಹಬ್ಬದ ನಂತರ ದೇವಾಲಯಗಳಿಗೆ ಹೋಗಬಾರದು. ಚರ್ಚ್ ಹಾಗೂ ಮಸೀದಿಗಳಲ್ಲಿ ಸಾಮೂಹಿಕವಾಗಿ ಪಾರ್ಥನೆ ಮಾಡುವುದನ್ನು ನಿಲ್ಲಿಸಬೇಕು. ಮನೆಗಳಲ್ಲೇ ಪ್ರಾರ್ಥನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕೊರೊನಾ ಸೋಂಕಿನ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ ಅವರ ಮೊಬೈಲ್‌ ಸಂಖ್ಯೆ 9448523683 ಅಥವಾ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ 1077 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಕೊಡಬಹುದು’ ಎಂದು ವಿವರಿಸಿದರು.

‘ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಮನೆಗೆ ಬೇಕಾದ ಅಗತ್ಯ ವಸ್ತುಗಳ್ನು ಖರೀದಿಸಲು ಮನೆಯಿಂದ ಒಬ್ಬರು ಮಾತ್ರ ಹೊರಗೆ ಬರಬೇಕು. ಖರೀದಿ ಮಾಡುವ ಸ್ಥಳದಲ್ಲಿ ಗುಂಪುಗೂಡಬಾರದು’ ಎಂದು ಎಚ್ಚರಿಕೆ ನೀಡಿದರು.

ದೂರು ಬಂದಿವೆ: ‘ಟ್ಯಾಂಕರ್ ನೀರು ಸರಬರಾಜು ಮಾಡುವ ಮಾಲೀಕರು ಪರಿಸ್ಥಿತಿಯ ಲಾಭ ಪಡೆದು ನೀರಿನ ಬೆಲೆ ಹೆಚ್ಚಿಸಿರುವ ಬಗ್ಗೆ ದೂರು ಬಂದಿವೆ. ನಗರಸಭೆಯಿಂದ ಟ್ಯಾಂಕರ್‌ ಲೋಡ್‌ ನೀರಿಗೆ ₹ 500 ನಿಗದಿ ಮಾಡಿದ್ದು, ಖಾಸಗಿ ಟ್ಯಾಂಕರ್‌ ಮಾಲೀಕರು ಸಹ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ನೀರಿಗೆ ಹೆಚ್ಚಿನ ಬೆಲೆ ಕೇಳುವ ಟ್ಯಾಂಕರ್‌ ಮಾಲೀಕರು ವಿರುದ್ಧ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಬೇಕು’ ಎಂದು ಕೋರಿದರು.

‘ನಗರ ಪ್ರದೇಶದ ಮತ್ತು ಪಟ್ಟಣದ ನಿವಾಸಿಗಳು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಅವರ ಮೊಬೈಲ್‌ ಸಂಖ್ಯೆ 9945541467ಕ್ಕೆ ಕರೆ ಮಾಡಿ ದೂರು ಕೊಡಬಹುದು. ಅದೇ ರೀತಿ ಗ್ರಾಮೀಣ ಭಾಗದ ಜನರು ಗ್ರಾಮೀಣ ನೀರು ಸರಬರಾಜು ಇಲಾಖೆ ಎಂಜಿನಿಯರ್ ವೆಂಕಟಾಚಲಯ್ಯ ಅವರ ಮೊಬೈಲ್‌ ಸಂಖ್ಯೆ 9448250022 ಅಥವಾ ಮಾಲೂರು ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಅವರ 9663333250 ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ದೂರು ಕೊಡಬೇಕು’ ಎಂದು ವಿವರಿಸಿದರು.

‘ಕೋಲಾರ ತಾಲ್ಲೂಕಿನಲ್ಲಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು 9740817151, ಬಂಗಾರಪೇಟೆ ತಾಲ್ಲೂಕಿನಲ್ಲಿ ಎನ್.ವೆಂಕಟೇಶಪ್ಪ 9448155288, ಮುಳಬಾಗಿಲು ತಾಲ್ಲೂಕಿನಲ್ಲಿ ಎಂ.ಬಾಬು 7975460292, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಎಸ್.ಆನಂದ್‌ 9141419999 ಹಾಗೂ ಕೆಜಿಎಫ್ ತಾಲ್ಲೂಕಿನಲ್ಲಿ ರವೀಂದ್ರ ಅವರ 9739631382 ಮೊಬೈಲ್‌ ಸಂಖ್ಯೆಗೆ ದೂರು ಕೊಡಬಹುದು’ ಎಂದು ಹೇಳಿದರು.

ಆದೇಶ ಪಾಲಿಸಬೇಕು: ‘ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸರ್ಕಾರದ ಆದೇಶ ಪಾಲಿಸಬೇಕು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಪೊಲೀಸ್‌ ಸಿಬ್ಬಂದಿಯೂ ಕರ್ಫ್ಯೂ ನಡುವೆಯೂ ಹೊರಗೆ ಓಡಾಡುತ್ತಿರುವ ವ್ಯಕ್ತಿಗಳ ಮನವೊಲಿಸಿ ಮನೆಗೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜನ ಮಾರುಕಟ್ಟೆಗೆ ಮುಗಿಬೀಳುವುದನ್ನು ನಿಯಂತ್ರಿಸಲಾಗಿದೆ. ಜನರು ಪರಿಸ್ಥಿತಿ ಅರಿತು ಮನೆಗಳಲ್ಲೇ ಇರಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಕಿವಿಮಾತು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.