ADVERTISEMENT

ಕೋಲಾರ: ಮಾಂಸ–ಮದ್ಯದಂಗಡಿ ತ್ಯಾಜ್ಯ ವಿಲೇವಾರಿ; ಜನರಿಗೆ ಕಿರಿಕಿರಿ

ಕಣ್ಮುಚ್ಚಿ ಕುಳಿತ ಆಡಳಿತ ಯಂತ್ರ: ನಗರಸಭೆಗೆ ಜನರ ಹಿಡಿಶಾಪ

ಜೆ.ಆರ್.ಗಿರೀಶ್
Published 13 ಮಾರ್ಚ್ 2022, 19:30 IST
Last Updated 13 ಮಾರ್ಚ್ 2022, 19:30 IST
ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್‌ ರಸ್ತೆ ಬದಿಯಲ್ಲಿ ರಾಶಿಯಾಗಿ ಬಿದ್ದಿರುವ ತ್ಯಾಜ್ಯ
ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್‌ ರಸ್ತೆ ಬದಿಯಲ್ಲಿ ರಾಶಿಯಾಗಿ ಬಿದ್ದಿರುವ ತ್ಯಾಜ್ಯ   

ಕೋಲಾರ: ನಗರದಲ್ಲಿನ ಮಾಂಸ ಹಾಗೂ ಮದ್ಯದಂಗಡಿಗಳ ಮಾಲೀಕರು ಕೆರೆ ಅಂಗಳ, ಸರ್ವಿಸ್‌ ರಸ್ತೆಗಳ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಮನಬಂದಂತೆ ಕಸ ವಿಲೇವಾರಿ ಮಾಡುತ್ತಿದ್ದು, ನಗರಸಭೆ ಆಡಳಿತ ಯಂತ್ರ ಕಣ್ಮುಚ್ಚಿ ಕುಳಿತಿದೆ.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದ ಸರ್ವಿಸ್‌ ರಸ್ತೆ, ಕೋಡಿಕಣ್ಣೂರು ಕೆರೆ ಅಂಗಳ, ಟೇಕಲ್‌ ರಸ್ತೆಯ ರೈಲು ಹಳಿ ಅಕ್ಕಪಕ್ಕ ಮಾಂಸದ ತ್ಯಾಜ್ಯ ರಾಶಿಯಾಗಿ ಬಿದ್ದಿದೆ. ಮದ್ಯದ ಖಾಲಿ ಬಾಟಲಿ ಹಾಗೂ ಪೊಟ್ಟಣಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ರಸ್ತೆ ಬದಿಯಲ್ಲಿ ವಿಲೇವಾರಿ ಮಾಡಲಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಕೋಳಿ, ಕುರಿ, ಹಂದಿ ಹಾಗೂ ದನದ ಮಾಂಸ, ಮೀನು ಮಾರಾಟ ಮಳಿಗೆಗಳು ಹಾದಿ ಬೀದಿಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಇವುಗಳ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ನಗರಸಭೆ ಆರೋಗ್ಯ ಶಾಖೆಯು ರೋಗಗ್ರಸ್ಥವಾಗಿದೆ. ನಗರದ ಜನಸಂಖ್ಯೆಗೆ ಹೋಲಿಸಿದರೆ ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಿದ್ದು, ಕಸ ಸಂಗ್ರಹಣೆ ಹಾಗೂ ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದೆ.

ADVERTISEMENT

ಪೌರ ಕಾರ್ಮಿಕರು ನಿಯಮಿತವಾಗಿ ಮದ್ಯದಂಗಡಿಗಳು, ಮಾಂಸ ಮಾರಾಟ ಮಳಿಗೆಗಳು, ಮೀನಿನ ಅಂಗಡಿಗಳ ಬಳಿ ಹೋಗಿ ಕಸ ಸಂಗ್ರಹಣೆ ಮಾಡುತ್ತಿಲ್ಲ. ಹೀಗಾಗಿ ಅಂಗಡಿಗಳ ಮಾಲೀಕರಿಗೆ ಕಸ ವಿಲೇವಾರಿಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಂಗಡಿಯಲ್ಲಿ ಕಸ ಸಂಗ್ರಹಿಸಿಟ್ಟುಕೊಂಡರೆ ದುರ್ನಾತ ಹೆಚ್ಚಿ ವಹಿವಾಟಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕೆಲಸಗಾರರು ಬೀದಿ ಬದಿಯಲ್ಲಿ ಸುರಿಯುತ್ತಿದ್ದಾರೆ.

ನಗರ ಸೌಂದರ್ಯಕ್ಕೆ ಧಕ್ಕೆ: ರಸ್ತೆ ಬದಿಯಲ್ಲಿ ವಿಲೇವಾರಿಯಾಗದೆ ಉಳಿದಿರುವ ಮಾಂಸದ ತ್ಯಾಜ್ಯ, ಮದ್ಯದ ಖಾಲಿ ಬಾಟಲಿಗಳು ನಗರದ ಅಂದಗೆಡಿಸಿವೆ. ಮಾಂಸದ ತ್ಯಾಜ್ಯವು ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸದ ರಾಶಿಯು ರಸ್ತೆ ಹಾಗೂ ಚರಂಡಿಗಳಿಗೂ ವ್ಯಾಪಿಸಿ, ವಾಹನಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಹಲವೆಡೆ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ಬಡಾವಣೆಗಳು ಕೊಳೆಗೇರಿಯಂತಾಗಿವೆ. ಯುಜಿಡಿಗಳಲ್ಲಿ ಮಾಂಸದ ತ್ಯಾಜ್ಯ ತುಂಬಿಕೊಂಡು ಮಲಮೂತ್ರ ಹೊರಗೆ ಹರಿಯುತ್ತಿದೆ.

ರೋಗ ಭೀತಿ: ಮಾಂಸದ ತ್ಯಾಜ್ಯದಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ತ್ಯಾಜ್ಯದ ರಾಶಿ ಬಳಿ ನಾಯಿ, ಹಂದಿ ಹಾಗೂ ಸೊಳ್ಳೆ ಕಾಟ ಹೆಚ್ಚಿದ್ದು, ಅಕ್ಕಪಕ್ಕದ ನಿವಾಸಿಗಳು ಪ್ರತಿನಿತ್ಯ ಬವಣೆ ಪಡುವಂತಾಗಿದೆ. ಈಗಾಗಲೇ ಹಲವರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.

ಸರ್ವಿಸ್‌ ರಸ್ತೆಗಳಲ್ಲಿ ಬೀದಿ ನಾಯಿಗಳ ಅಡ್ಡಾದಿಡ್ಡಿ ಓಡಾಟದಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಮಾಂಸದ ತ್ಯಾಜ್ಯದ ಬಳಿ ಬರುವ ನಾಯಿಗಳು ಬೈಕ್‌ ಸವಾರರನ್ನು ಅಟ್ಟಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಅಲ್ಲದೇ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ಅಡ್ಡ ಹೋಗಿ ಅಪಘಾತಕ್ಕೆ ಕಾರಣವಾಗುತ್ತಿವೆ. ರಸ್ತೆಯಲ್ಲಿ ನಾಯಿಗಳಿಂದ ನಿತ್ಯವೂ ಸಣ್ಣ ಪುಟ್ಟ ಅಪಘಾತ ಸಂಭವಿಸುತ್ತಿವೆ. ಸರ್ವಿಸ್‌ ರಸ್ತೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಹೋಗುವವರ ಮೇಲೂ ಬೀದಿ ನಾಯಿಗಳು ಎರಗುತ್ತಿವೆ.

ಕಸದ ಸಮಸ್ಯೆ ಸಂಬಂಧ ಸಾರ್ವಜನಿಕರು ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಮಾಂಸ ಮತ್ತು ಮದ್ಯದಂಗಡಿ ತ್ಯಾಜ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿಲ್ಲ. ಕಸದ ಸಮಸ್ಯೆಯು ನಗರವಾಸಿಗಳ ನಿದ್ದೆಗೆಡಿಸಿದ್ದು, ಜನ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.