ADVERTISEMENT

ಬಂತು ಬಯಲು ಸೀಮೆ ಖರ್ಜೂರ: ಜನರ ಬಾಯಲ್ಲಿ ನೀರೂರಿಸುವ ಹಣ್ಣು

ಆರ್.ಚೌಡರೆಡ್ಡಿ
Published 4 ಜೂನ್ 2021, 2:18 IST
Last Updated 4 ಜೂನ್ 2021, 2:18 IST
ಶ್ರೀನಿವಾಸಪುರ ಹೊರವಲಯದ ರೈಲು ನಿಲ್ದಾಣದ ಸಮೀಪ ಕಾಯಿ ಬಿಟ್ಟು ಕಂಗೊಳಿಸುತ್ತಿರುವ ಈಚಲು ಮರ
ಶ್ರೀನಿವಾಸಪುರ ಹೊರವಲಯದ ರೈಲು ನಿಲ್ದಾಣದ ಸಮೀಪ ಕಾಯಿ ಬಿಟ್ಟು ಕಂಗೊಳಿಸುತ್ತಿರುವ ಈಚಲು ಮರ   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕಾಯಿ ಗೊಂಚಲುಗಳನ್ನು ಮುಡಿಗೇರಿಸಿಕೊಂಡು ಕಂಗೊಳಿಸುತ್ತಿರುವ ಈಚಲು ಮರಗಳು ಬಾಯಲ್ಲಿ ನೀರೂರಿಸುತ್ತಿವೆ. ಗ್ರಾಮೀಣ ಪ್ರದೇಶದ ಮಕ್ಕಳು ಹಣ್ಣಾದ ಈಚಲು ಕಾಯಿ ಆರಿಸಿ ತಿನ್ನಲು ಮರಗಳ ಕಡೆ ಹೆಜ್ಜೆ ಹಾಕಿದ್ದಾರೆ.

ಈಚಲು ಕಾಯಿಯನ್ನು ‘ಬಯಲು ಸೀಮೆಯ ಖರ್ಜೂರ’ ಎಂದು ಕರೆಯುವುದು ರೂಢಿ. ಈಚಲು ಮರಗಳನ್ನು ಯಾರೂ ಬೆಳೆಸುವುದಿಲ್ಲ. ಬದಲಿಗೆ ನೈಸರ್ಗಿಕವಾಗಿ ಸರ್ಕಾರಿ ಜಮೀನು ಅಥವಾ ಮಾವಿನ ತೋಟಗಳ ಬೇಲಿಗಳಲ್ಲಿ ಬೆಳೆದು
ನಿಂತಿವೆ.

ಹಳದಿ ಬಣ್ಣಕ್ಕೆ ತಿರುಗಿದ ಈಚಲು ಗೊಂಚಲುಗಳನ್ನು ದೋಟಿ ಸಹಾಯದಿಂದ ಕೊಯ್ದು ತಂದು ಮನೆಯಲ್ಲಿಟ್ಟು ಹಣ್ಣು ಮಾಡಿ ತಿನ್ನುವುದು ಹಿಂದಿನಿಂದಲೂ ನಡೆದು ಬಂದಿದೆ.

ADVERTISEMENT

ಈಚಲು ಹಣ್ಣನ್ನು ಸಂಗ್ರಹಿಸಿ ಬುಟ್ಟಿಗಳಲ್ಲಿ ಕೊಂಡೊಯ್ದು ಶಾಲೆಯ ಸಮೀಪ ಇಟ್ಟುಕೊಂಡು ಮಾರುವವರಿಗೂ ಕೊರತೆ ಇರಲಿಲ್ಲ. ಆದರೆ, ಈಗ ಕೊರೊನಾ ಸಂಕಷ್ಟದ ನಡುವೆ ಶಾಲೆಗಳಿಗೆ ರಜೆ ನೀಡಲಾಗಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಬಾರಿ ಈಚಲು ಕಾಯಿಯಿಂದ ವಂಚಿತರಾಗಿದ್ದಾರೆ.

ಆದರೆ, ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಮರಗಳ ಸಮೀಪ ಹೋಗಿ ಕಲ್ಲು ಬೀಸಿ ಕಾಯಿ ಉದುರಿಸಿ ಸವಿಯುತ್ತಿದ್ದಾರೆ. ಗೊಂಚಲು ಕೊಯ್ಯಲು ಹಿರಿಯರು ನೆರವಿಗೆ ಬರುತ್ತಾರೆ.

ಹಿಂದೆ ಈಚಲು ಮರದಿಂದ ಸೇಂದಿ ತೆಗೆಯುತ್ತಿದ್ದರು. ಅದರ ಸುಳಿಯಲ್ಲಿನ ಗಡ್ಡೆಯ ಸವಿಯನ್ನು ತಿಂದೇ ಅನುಭವಿಸಬೇಕು. ಇಷ್ಟು ಮಾತ್ರವಲ್ಲದೆ, ಅದರ ಎಲೆಯಿಂದ ಚಾಪೆ ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಎಲೆಯ ದಂಟಿನಿಂದ ಬುಟ್ಟಿ ಹಾಗೂ ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುತ್ತಾರೆ.

ಕಳ್ಳು ತೆಗೆಯುತ್ತಿದ್ದ ಕಾಲದಲ್ಲಿ ಖಾಸಗಿ ಜಮೀನಿನಲ್ಲೂ ಈಚಲು ಮರಗಳನ್ನು ಬೆಳೆಯಲಾಗುತ್ತಿತ್ತು. ಸರ್ಕಾರ ಖರೀದಿಸಿ ಕಳ್ಳು ತೆಗೆಯಲು ಬಳಸಿಕೊಳ್ಳುತ್ತಿತ್ತು. ಸರ್ಕಾರ ಸೇಂದಿ ತೆಗೆಯುವುದನ್ನು ನಿಷೇಧಿಸಿದ ಮೇಲೆ ಖಾಸಗಿ ಜಮೀನುಗಳಲ್ಲಿ ಬೆಳೆಯಲಾಗಿದ್ದ ಮರಗಳಿಗೆ ಕೊಡಲಿ ಹಾಕಲಾಯಿತು. ಆದರೆ, ಸರ್ಕಾರಿ ಜಮೀನಲ್ಲಿ ಬೆಳೆಯಲಾಗಿರುವ ಮರಗಳು ಮಾತ್ರ ಉಳಿದುಕೊಂಡಿವೆ.

ಆದರೂ, ಕಾಯಿಯ ರುಚಿಗೆ ಮಾರುಹೋದ ಎಲ್ಲ ವಯೋಮಾನದ ವ್ಯಕ್ತಿಗಳೂ ಈಚಲು ಮರವನ್ನು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಯಾರೂ ಈ ಮರವನ್ನು ಕಡಿಯುವುದಿಲ್ಲ. ಹಾಗಾಗಿ ತಾಲ್ಲೂಕಿನಾದ್ಯಂತ ಈಚಲು ಜೀವಂತವಾಗಿದೆ. ಬಯಲು ಸೀಮೆಯ ಜನರಿಗೆ ಖರ್ಜೂರವಾಗಿ ಬಾಯಲ್ಲಿ ನೀರೂರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.