ADVERTISEMENT

ಪ್ರಧಾನಿ ಮೋದಿ ಪ್ರತಿಕೃತಿ ದಹನ

ಉತ್ತರಪ್ರದೇಶದಲ್ಲಿ ಹೋರಾಟನಿರತ ರೈತರ ಹತ್ಯೆಗೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 16:00 IST
Last Updated 4 ಅಕ್ಟೋಬರ್ 2021, 16:00 IST
ಉತ್ತರಪ್ರದೇಶದಲ್ಲಿ ನಡೆದ ಹೋರಾಟನಿರತ ರೈತರ ಹತ್ಯೆ ಖಂಡಿಸಿ ಸಂಯುಕ್ತ ಕಿಸಾನ್ ಸಮಿತಿ ಸದಸ್ಯರು ಕೋಲಾರದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದರು
ಉತ್ತರಪ್ರದೇಶದಲ್ಲಿ ನಡೆದ ಹೋರಾಟನಿರತ ರೈತರ ಹತ್ಯೆ ಖಂಡಿಸಿ ಸಂಯುಕ್ತ ಕಿಸಾನ್ ಸಮಿತಿ ಸದಸ್ಯರು ಕೋಲಾರದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದರು   

ಕೋಲಾರ: ಉತ್ತರಪ್ರದೇಶದಲ್ಲಿ ಹೋರಾಟನಿರತ ರೈತರ ಮೇಲೆ ಕಾರು ಹರಿಸಿ 4 ಮಂದಿಯನ್ನು ಹತ್ಯೆ ಮಾಡಿರುವ ಪ್ರಕರಣ ಖಂಡಿಸಿ ಸಂಯುಕ್ತ ಕಿಸಾನ್ ಸಮಿತಿ ಸದಸ್ಯರು ಇಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.

ಮೆಕ್ಕೆ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಮತ್ತು ಉತ್ತರಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಉತ್ತರಪ್ರದೇಶದ ಲಖಿಂಪುರ್‌ ಖೇರಿ ಜಿಲ್ಲೆಯ ಬಂಬಿರ್‌ಪುರ ಗ್ರಾಮಕ್ಕೆ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಭೇಟಿ ವಿರೋಧಿಸಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯ ಕಾರುಗಳನ್ನು ಹರಿಸಲಾಗಿದೆ. ಇದು ಬಿಜೆಪಿಯ ಕೊಲೆ ಪಾತಕ ದಾಳಿ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಕಿಡಿಕಾರಿದರು.

ADVERTISEMENT

‘ಕೇಂದ್ರ ಸರ್ಕಾರದ ರೈತ ಮತ್ತು ಕೃಷಿ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಶಾಂತಿಯುತ ಹೋರಾಟ ನಡೆಸುತ್ತಿರುವ ರೈತರನ್ನು ಮಾತುಕತೆ ಮೂಲಕ ಎದುರಿಸಲಾಗದ ಬಿಜೆಪಿ ನಾಯಕರು ಮತ್ತು ಅವರ ಮತ್ತವರ ಸರ್ಕಾರ ಕೊಲೆಗಡುಕ ನೀತಿ ಅನುಸರಿಸುತ್ತಿದೆ. ಹೋರಾಟನಿರತ ರೈತರ ಹತ್ಯೆಯು ಅತ್ಯಂತ ನಾಚಿಕೆಗೇಡಿನ ಮತ್ತು ಅನಾಗರಿಕ ವರ್ತನೆ’ ಎಂದು ಟೀಕಿಸಿದರು.

ಹತ್ತಿಕ್ಕುವ ಸಂಚು: ‘ಲೂಟಿಕೋರ ಕಾರ್ಪೊರೇಟ್‌ ಕಂಪನಿಗಳ ಪರವಾದ ಕೃಷಿ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿ ಸೇರಿದಂತೆ ದೇಶದೆಲ್ಲೆಡೆ ನಿರಂತರ ಹೋರಾಟ ನಡೆಯುತ್ತಿದೆ. ಈ ಐತಿಹಾಸಿಕ ಹೋರಾಟದಿಂದ ಬೆದರಿರುವ ಕಾರ್ಪೊರೇಟ್‌ ಕಂಪನಿಗಳು, ಬಿಜೆಪಿ, ಸಂಘ ಪರಿವಾರ ಮತ್ತು ಸರ್ಕಾರಗಳ ದುಷ್ಟಕೂಟವು ಹೋರಾಟವನ್ನು ಹತ್ತಿಕ್ಕುವ ಸಂಚು ಮಾಡುತ್ತಿದೆ. ರೈತರ ಹತ್ಯೆ ಪ್ರಕರಣದಲ್ಲಿ ಸಚಿವ ಅಜಯ್‌ ಮಿಶ್ರಾ ಅವರ ಮಗನ ಮತ್ತು ಸಂಬಂಧಿಕರ ಪಾತ್ರವಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಬಂಡವಾಳಶಾಹಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಕೃಷಿ ಉಳಿಸಲು ದೇಶದ ಮೂಲೆ ಮೂಲೆಯಲ್ಲಿ ಹೋರಾಟ ನಡೆಯುತ್ತದೆ. ಆದರೆ, ಕೇಂದ್ರ ಸರ್ಕಾರ ರೈತರ ಕಷ್ಟ ಕೇಳುವ ಗೋಜಿಗೆ ಹೋಗಿಲ್ಲ. ತುಘಲಕ್‌ ದರ್ಬಾರ್‌ ನಡೆಸುತ್ತಿರುವ ಕೇಂದ್ರ ಸರ್ಕಾರಕ್ಕೆ ನೈತಿಕತೆಯಿಲ್ಲ’ ಎಂದು ಗುಡುಗಿದರು.

‘ರೈತರ ಹತ್ಯೆ ಪ್ರಕರಣ ಸಂಬಂಧ ಪ್ರಧಾನಿಯು ಸಚಿವ ಅರ್ಜುನ್ ಮಿಶ್ರಾರ ರಾಜೀನಾಮೆ ಪಡೆಯಬೇಕು. ಆರೋಪಿಗಳಾದ ಸಚಿವರ ಪುತ್ರ ಮತ್ತು ಸಂಬಂಧಿಕರನ್ನು ಕೂಡಲೇ ಬಂಧಿಸಬೇಕು. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಮೃತ ರೈತರ ಕುಟುಂಬಕ್ಕೆ ತಲಾ ₹ 1 ಕೋಟಿ ಪರಿಹಾರ ನೀಡಬೇಕು. ಹಿಂಸಾಚಾರದಲ್ಲಿ ಗಾಯಗೊಂಡಿರುವ ಹೋರಾಟಗಾರರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ವಿಜಿಕೃಷ್ಣ, ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್, ರೈತ ಸಂಘ ಸಾಮೂಹಿಕ ನಾಯಕತ್ವ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಶಿವಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಅನಂದ್, ನಗರಸಭೆ ಮಾಜಿ ಸದಸ್ಯ ಸಲ್ಲಾವುದ್ದೀನ್ ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.