ADVERTISEMENT

ಕೋಲಾರ ಜಿಲ್ಲೆಯಲ್ಲಿ ಪೋಕ್ಸೊ ನ್ಯಾಯಾಲಯ ಆರಂಭ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 14:20 IST
Last Updated 28 ಡಿಸೆಂಬರ್ 2020, 14:20 IST
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್‌ ಕೋಲಾರದಲ್ಲಿ ಸೋಮವಾರ ಪೋಕ್ಸೊ ನ್ಯಾಯಾಲಯ ಉದ್ಘಾಟಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್‌ ಕೋಲಾರದಲ್ಲಿ ಸೋಮವಾರ ಪೋಕ್ಸೊ ನ್ಯಾಯಾಲಯ ಉದ್ಘಾಟಿಸಿದರು.   

ಕೋಲಾರ: ‘ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಜಿಲ್ಲೆಯಲ್ಲಿ ವಿಶೇಷವಾಗಿ ಪೋಕ್ಸೊ ನ್ಯಾಯಾಲಯ ಆರಂಭಿಸಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್ ಹೇಳಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನೂತನವಾಗಿ ಆರಂಭಿಸಿರುವ ಪೋಕ್ಸೊ ನ್ಯಾಯಾಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ‘ಇತರ ಪ್ರಕರಣಗಳ ರಾಜಿ ಸಂಧಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ ಪ್ರಾರಂಭಿಸಲಾಗಿದೆ’ ಎಂದರು.

‘ಪೋಕ್ಸೊ ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್‌ ನಿರ್ದೇಶನದಂತೆ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯ ಕಾರ್ಯರೂಪಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಜಿಲ್ಲೆಯಲ್ಲಿ 126 ಪೋಕ್ಸೊ ಪ್ರಕರಣಗಳ ವಿಚಾರಣೆ ಬಾಕಿಯಿವೆ. ಪ್ರತ್ಯೇಕ ನ್ಯಾಯಾಲಯ ಸ್ಥಾಪನೆ ಆಗಿರುವುದರಿಂದ ತ್ವರಿತವಾಗಿ ಈ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿ ಶೀಘ್ರವೇ ತೀರ್ಪು ನೀಡಲು ಸಾಧ್ಯವಾಗಲಿದೆ. ಇದಕ್ಕೆ ಒಂದು ವರ್ಷದ ಕಾಲಮಿತಿ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

48 ವಕೀಲರು: ‘ವಕೀಲರು, ಸಾರ್ವಜನಿಕರು, ಕಕ್ಷಿದಾರರು ರಾಜಿಯಾಗುವ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರದಲ್ಲಿ ಬಗೆಹರಿಸಿಕೊಳ್ಳಬಹುದು. 60 ದಿನದ ಕಾಲಮಿತಿಯೊಳಗೆ ಪ್ರಕರಣ ಇತ್ಯರ್ಥಪಡಿಸುತ್ತೇವೆ. ಮಧ್ಯಸ್ಥಿಕೆ ಕೇಂದ್ರದಲ್ಲಿ 48 ವಕೀಲರು ಕಾರ್ಯ ನಿರ್ವಹಿಸುತ್ತಿದ್ದು, ಇವರಿಗೆ ಕಕ್ಷಿದಾರರು ಶುಲ್ಕ ಪಾವತಿಸಬೇಕಿಲ್ಲ. ವಕೀಲರಿಗೆ ನ್ಯಾಯಾಲಯವೇ ಶುಲ್ಕ ಪಾವತಿಸಲಿದೆ’ ಎಂದು ಮಾಹಿತಿ ನೀಡಿದರು.

‘ಕ್ರಿಮಿನಲ್ ಪ್ರಕರಣ ಹೊರತುಪಡಿಸಿ ರಾಜಿಯಾಗಬಹುದಾದ ವಾಣಿಜ್ಯ, ಭೂ ವಿವಾದ, ಬ್ಯಾಂಕ್ ವ್ಯವಹಾರ ಪ್ರಕರಣಗಳಲ್ಲಿ ಎರಡೂ ಕಡೆಯವರು ಸಮ್ಮತಿಸಿದರೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಅಥವಾ ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಬಹುದು. ಮಧ್ಯಸ್ಥಿಕೆ ಕೇಂದ್ರವು ಲೋಕ ಅದಾಲತ್‌ನ ಮತ್ತೊಂದು ಭಾಗ’ ಎಂದು ತಿಳಿಸಿದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ ಗಜಾನನಭಟ್, ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಬಸಗೊಂಡ ಪುಲಿಕೇಶಿ ದೇವಮಾನೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶೈಯಂ ಕಮ್ರೋಜ್‌, ಸರ್ಕಾರಿ ಅಭಿಯೋಜಕ ಬರಕ್‌ ಉಲ್ಲಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.