ಬಂಗಾರಪೇಟೆ: 0–5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಬೇಕೆಂದು ಸಿಡಿಪಿಒ ಮುನಿರಾಜು ತಿಳಿಸಿದರು.
ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಲಿಯೊ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲ. ಮಗುವಿಗೆ ಸಣ್ಣ ಪ್ರಮಾಣದ ಶೀತ ಹಾಗೂ ಜ್ವರ ಇದ್ದರೂ ಲಸಿಕೆ ಹಾಕಿಸಬಹುದು. ಹಾಗಾಗಿ ನಿಮ್ಮ ಹತ್ತಿರದ ಅಂಗನವಾಡಿ, ಸರ್ಕಾರಿ ಶಾಲೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಿ. ಕೇವಲ ಲಸಿಕಾ ಕೇಂದ್ರಗಳಲ್ಲಿ ಮಾತ್ರವಲ್ಲದೆ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಿಸದ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಿಸಬೇಕು ಎಂದರು.
ಒಂದು ವೇಳೆ ಮಗು ಲಸಿಕಾ ಕೇಂದ್ರಕ್ಕೆ ಬರಲು ಸಾಧ್ಯವಾಗದಿದ್ದರೆ, ಆರೋಗ್ಯ ಕಾರ್ಯಕರ್ತರು ನಿಮ್ಮ ಮನೆಗೆ ಬಂದಾಗ ತಪ್ಪದೇ ಲಸಿಕೆ ಹಾಕಿಸಿ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಅಥವಾ ಮಾರುಕಟ್ಟೆಯಲ್ಲಿ ಲಸಿಕೆ ಹಾಕಿಸಬಹುದು ಎಂದರು.
ಈ ವೇಳೆ ಮೇಲ್ವಿಚಾರಕಿ ಶಾಂತಾ ಭಂಡಾರಿ, ಚೇತನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.