ADVERTISEMENT

ಡಿಕೆಶಿ ವಿರುದ್ಧ ರಾಜಕೀಯ ಪಿತೂರಿ: ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗುಡುಗು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 4:03 IST
Last Updated 25 ಸೆಪ್ಟೆಂಬರ್ 2019, 4:03 IST

ಕೋಲಾರ: ‘ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರನ್ನು ರಾಜಕೀಯವಾಗಿ ಮುಗಿಸಲು ಪಿತೂರಿ ನಡೆದಿದೆ’ ಎಂದು ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗುಡುಗಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶದಲ್ಲಿ ಮಾಫಿಯಾ ನಡೆಸುವವರು ಸಾಕಷ್ಟು ಜನ ಇದ್ದಾರೆ. ಅವರನ್ನೆಲ್ಲಾ ಬಿಟ್ಟು ಶಿವಕುಮಾರ್‌ ಅವರನ್ನು ದುರುದ್ದೇಶದಿಂದ ಬಂಧಿಸಲಾಗಿದೆ’ ಎಂದು ಕಿಡಿಕಾರಿದರು.

‘ಶಿವಕುಮಾರ್‌ ಅವರು ಡೈನಾಮಿಕ್ ಲೀಡರ್. ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ. ಅವರಿಗೆ ತೊಂದರೆ ಕೊಟ್ಟು ಶಕ್ತಿ ಕುಗ್ಗಿಸಲು ಜಾರಿ ನಿರ್ದೇಶನಾಲಯದ ಅಸ್ತ್ರ ಬಳಸಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ನಾನು, ಚಿಂತಾಮಣಿಯ ಮಾಜಿ ಶಾಸಕ ಸುಧಾಕರ್, ಮಾಲೂರಿನ ಮಾಜಿ ಶಾಸಕ ಮಂಜುನಾಥಗೌಡ ಒಟ್ಟಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಜಿಲ್ಲೆಯ ಅಭಿವೃದ್ಧಿಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದೇವೆ ಅಷ್ಟೆ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲೆಯ ಸಮಗ್ರ ಅಭಿವೃದ್ದಿ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೆಲ ಬೇಡಿಕೆ ಸಲ್ಲಿಸಿದ್ದೇವೆ. ಮುಳಬಾಗಿಲು ತಾಲ್ಲೂಕಿನ ಸಿದ್ದಘಟ್ಟ ಬಳಿ ಡ್ಯಾಂ ನಿರ್ಮಿಸಿ ಕುಡಿಯುವ ನೀರು ಒದಗಿಸುವುದು, ಕೋಲಾರಮ್ಮ ಕೆರೆಯನ್ನು ಪ್ರವಾಸಿ ತಾಣವಾಗಿ ಮಾಡುವುದು, ಕೋಲಾರ ನಗರಸಭೆ ಹಾಗೂ ಜಿಲ್ಲೆಯ ವಿವಿಧ ಪುರಸಭೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೋರಲಾಗಿದೆ. ಈ ಪೈಕಿ ಕನಿಷ್ಠ 50ರಷ್ಟು ಅಭಿವೃದ್ಧಿ ಕೆಲಸವಾದರೆ ಮಾತ್ರ ಬಿಜೆಪಿ ಸೇರುವ ಬಗ್ಗೆ ಯೋಚನೆ ಮಾಡುತ್ತೇನೆ’ ಎಂದರು.

ಸ್ವರ್ಧೆ ಮಾಡಲ್ಲ: ‘ಕೋಲಾರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳು ಈ ಹಿಂದೆ ಒತ್ತಾಯಿಸಿದರೂ ಸ್ಪರ್ಧೆ ಮಾಡಲಿಲ್ಲ. ಅದೇ ರೀತಿ ಮುಂದೆಯೂ ಕೋಲಾರ ಕ್ಷೇತ್ರದಲ್ಲಿ ಚುನಾವಣೆಗೆ ಸ್ವರ್ಧಿಸಲ್ಲ. ರಾಜಕೀಯವಾಗಿ ಇತರರನ್ನು ಬೆಂಬಲಿಸುತ್ತೇನೆ. ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್‌, ಕೋಲಾರದಲ್ಲಿ ಅನಿಲ್ ಹೇಳಿದವರಿಗೆ, ಕೆಜಿಎಫ್‌ನಲ್ಲಿ ಎನ್‌ಎಸ್‌ಯುಐ ಶ್ರೀನಿವಾಸ್ ಮತ್ತು ಮಾಜಿ ಶಾಸಕ ಸಂಪಂಗಿ ಹೇಳಿದವರಿಗೆ, ಮಾಲೂರಿನಲ್ಲಿ ಮಂಜುನಾಥಗೌಡರಿಗೆ ಬೆಂಬಲ ನೀಡುತ್ತೇನೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನ ತಮಗೆ ನೀಡುವುದಾಗಿ ಆ ಪಕ್ಷದ ವರಿಷ್ಠರು ಭರವಸೆ ಕೊಟ್ಟಿದ್ದಾರೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ‘ನಾನು ಈಗಲೇ ಯಾವುದೇ ಅಧಿಕಾರ ಬಯಸುವುದಿಲ್ಲ. ನನಗೆ ಅಭಿವೃದ್ದಿ ಮುಖ್ಯ. ದುಡ್ಡು ಮಾಡುವ ಆಸೆಯಿಲ್ಲ. ಜನರ ಕೆಲಸ ಮಾಡಿಕೊಂಡು ಹೋಗುವೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.