ಬಂಗಾರಪೇಟೆ: ರಾಜ್ಯದಲ್ಲಿರುವ ಗ್ಯಾರಂಟಿ ಸರ್ಕಾರವು ಪ್ರತಿದಿನವೂ ಒಂದಲ್ಲಾ ಒಂದು ವಿಚಾರದಲ್ಲಿ ಎಡವುತ್ತಿರುವುದರ ಜೊತೆಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಿಷ್ಠಾವಂತ ಅಧಿಕಾರಿಗಳ ಮೇಲೆ ದರ್ಪ ತೋರಿಸುತ್ತಿರುವ ಸರ್ಕಾರದ ನಡೆ ಬಗ್ಗೆ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಹಾಗೂ ಪಕ್ಷ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಈ ಸರ್ಕಾರವನ್ನು ಬದಲಾಯಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ ಎಂದರು.
ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ, ಶಕ್ತಿ ಯೋಜನೆಗಳನ್ನು ಪ್ರತಿ ತಿಂಗಳು ಸಮರ್ಪಕವಾಗಿ ನೀಡಲು ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆ ಅಕ್ಕಿ ಸಾಗಣೆ ಮಾಡಿದ ಲಾರಿ ಮಾಲೀಕರಿಗೆ ಐದು ತಿಂಗಳಿನಿಂದ ಹಣ ನೀಡದೆ, ಸರ್ಕಾರ ಸತಾಯಿಸುತ್ತಿದೆ. ಇದು ಸರ್ಕಾರ ದಿವಾಳಿಯಾಗಿರುವುದನ್ನು ತೋರಿಸುತ್ತಿದೆ ಎಂದು ಟೀಕಿಸಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಕುರಿತು ಕೋರ್ಟ್ ಛೀಮಾರಿ ಹಾಕಿದ್ದರೂ, ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ನಡೆಸಲು ದಮ್ಮು, ತಾಕತ್ತು ಇಲ್ಲ. ಚುನಾವಣೆ ನಡೆಸಿದರೆ ತಮ್ಮ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವರು ಎಂಬ ಭೀತಿಯಿಂದ ಸರ್ಕಾರ ಕಾಲಹರಣ ಮಾಡುತ್ತಿದೆ. ಎರಡೂವರೆ ವರ್ಷಗಳಿಂದ ಸರ್ಕಾರ ಜನರಿಗೆ ಅನುಕೂಲವಾಗುವಂತ ಯಾವುದೇ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದರು.
ಅಭಿವೃದ್ದಿ ಎಂಬುದು ಕಾಗದಕ್ಕೆ ಸೀಮಿತವಾಗಿದ್ದು, ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಶೂನ್ಯವಾಗಿವೆ. ಐದು ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ರಾಜ್ಯದ ಜನರಿಗೆ ತಲುಪಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರವೇ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದು ಕೊಂಡಾಡಿದರು.
ಸಂಸದ ಎಂ. ಮಲ್ಲೇಶಬಾಬು ಮಾತನಾಡಿ, ‘ಸಂಸದನಾಗಿ ಆಯ್ಕೆಯಾದ ಬಳಿಕ ನಾನು ಸುಮ್ಮನೆ ದೆಹಲಿಯಲ್ಲಿ ಕೂರಲಿಲ್ಲ. ಸಚಿವರ ಬಳಿ ಚರ್ಚಿಸಿ ಜಿಲ್ಲೆಗೆ ಅಗತ್ಯವಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾಪ ಸಲ್ಲಿಸಿದ್ದೇನೆ. ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಮಂಜೂರು ಮಾಡಿಸಿಕೊಂಡಿದ್ದೇನೆ’ ಎಂದರು.
ಕೋಲಾರ–ಚೆನ್ನೈ ಹೆದ್ದಾರಿಯನ್ನು ನಾಲ್ಕು ಪಥದಿಂದ 6 ಪಥವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಚುನಾವಣೆಗೆ ಇನ್ನೂ ನಾಲ್ಕು ವರ್ಷ ಇರುವುದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೋರಾಡುತ್ತೇನೆ ಎಂದರು.
ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿರುವುದು ತಪ್ಪಲ್ಲ. ಆದರೆ, ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರತಿ ತಿಂಗಳು ₹55 ಸಾವಿರ ಕೋಟಿ ಎಲ್ಲಿಂದ ತರುತ್ತಾರೆ. ಗ್ಯಾರಂಟಿ ಯೋಜನೆಗೆ ಇಷ್ಟು ಹಣ ವೆಚ್ಚವಾದರೆ, ಅಧಿಕಾರ ನಡೆಸುವುದು ಹೇಗೆ? ವಸತಿ ಯೋಜನೆಯಡಿ ಎಷ್ಟು ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ದಲ್ಲಾಳಿಗಳನ್ನು ಇಟ್ಟುಕೊಂಡು ಸರ್ಕಾರವು ಕಮಿಷನ್ ರಾಜಕಾರಣ ಮಾಡುತ್ತಿದೆ. ಈ ಮಾತನ್ನು ನಾನು ಹೇಳುತ್ತಿರುವುದಲ್ಲ. ಬದಲಿಗೆ ಕಾಂಗ್ರೆಸ್ ಶಾಸಕರು ಮತ್ತು ಸಚಿವರೇ ಆರೋಪಿಸುತ್ತಿದ್ದಾರೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಶಾಸಕ ವೆಂಕಟಶಿವಾರೆಡ್ಡಿ, ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು,ಚೌಡರೆಡ್ಡಿ, ರಶ್ಮಿ ರಾಮೇಗೌಡ, ವಡಗೂರು ಹರೀಶ್, ರಾಮಚಂದ್ರಪ್ಪ, ಮಂಗಮ್ಮ ಮುನಿಸ್ವಾಮಿ, ವಡಗೂರು ರಾಮು, ಬಾಲಕೃಷ್ಣ, ವೈ. ಸುನಿಲ್ ಕುಮಾರ್, ಜ್ಯೋತೇನಹಳ್ಳಿ ರಾಮಪ್ಪ, ಜೆಸಿಬಿ ನಾರಾಯಣಪ್ಪ, ಜಿ.ವಿ. ಶ್ರೀನಿವಾಸ್ ಮೂರ್ತಿ, ಚಂದ್ರಪ್ಪ, ದೇವರಾಜು, ಯಲ್ಲಪ್ಪ, ಬಾಲಚಂದ್ರ ಉಪಸ್ಥಿತರಿದ್ದರು.
Cut-off box - 2028ಕ್ಕೆ ಮೈತ್ರಿ ಸರ್ಕಾರ: ಎಚ್‌ಡಿಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಹಾಗೂ ತಾಲ್ಲೂಕಿಗೆ ನೀಡಿರುವ ಕೊಡುಗೆಗಳನ್ನು ಜನರು ಇಂದಿಗೂ ಮರೆತಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು. 2028ರಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬರಲಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಬೇರುಮಟ್ಟದಿಂದ ಪಕ್ಷದ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.