ADVERTISEMENT

ಕಳಪೆ ತೊಗರಿ ಬೇಳೆ ಪೂರೈಕೆ: ಕ್ರಮಕ್ಕೆ ಒತ್ತಾಯ

ಗುತ್ತಿಗೆದಾರರು– ಅಧಿಕಾರಿಗಳ ವಿರುದ್ಧ ರೈತ ಸಂಘ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಮೇ 2019, 12:59 IST
Last Updated 17 ಮೇ 2019, 12:59 IST
ಅನ್ನಭಾಗ್ಯ ಯೋಜನೆಯಡಿ ಕಳಪೆ ತೊಗರಿ ಬೇಳೆ ಸರಬರಾಜು ಮಾಡಿರುವ ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯವಸ್ಥಾಪಕ ಶಿವಣ್ಣ ಅವರಿಗೆ ಮನವಿ ಸಲ್ಲಿಸಿದರು.
ಅನ್ನಭಾಗ್ಯ ಯೋಜನೆಯಡಿ ಕಳಪೆ ತೊಗರಿ ಬೇಳೆ ಸರಬರಾಜು ಮಾಡಿರುವ ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯವಸ್ಥಾಪಕ ಶಿವಣ್ಣ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ತೊಗರಿ ಬೇಳೆ ಕಳಪೆಯಾಗಿದ್ದು, ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶುಕ್ರವಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯವಸ್ಥಾಪಕ ಶಿವಣ್ಣ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಬಡ ಜನರು ಹಸಿವಿನಿಂದ ನರಳಬಾರದೆಂದು ಯೋಜನೆಯಡಿ ವಿವಿಧ ಆಹಾರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದೆ. ಆದರೆ, ಗುತ್ತಿಗೆದಾರರು ಕಳಪೆ ಆಹಾರ ಪದಾರ್ಥಗಳನ್ನು ಪೂರೈಸಿ ಸರ್ಕಾರಕ್ಕೆ ಹಾಗೂ ಪಡಿತರದಾರರಿಗೆ ವಂಚಿಸುತ್ತಿದ್ದಾರೆ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಆಹಾರ ಸಮಸ್ಯೆಯಿಂದ ಮತ್ತು ಅಪೌಷ್ಟಿಕತೆಯಿಂದ ನರಳಬಾರದೆಂಬ ಕಾರಣಕ್ಕೆ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಆದರೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಯೋಜನೆ ಹಳ್ಳ ಹಿಡಿಯುವಂತೆ ಮಾಡಿದ್ದಾರೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ADVERTISEMENT

‘ಅಧಿಕಾರಿಗಳು ಲಂಚದಾಸೆಗೆ ಗುತ್ತಿಗೆದಾರರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಜಿಲ್ಲೆಗೆ ಪೂರೈಕೆಯಾಗಿರುವ ತೊಗರಿ ಬೇಳೆ ಕಳಪೆಯಾಗಿರುವ ಸಂಗತಿ ಗೊತ್ತಿದ್ದರೂ ಅಧಿಕಾರಿಗಳು ಆ ಬೇಳೆಯನ್ನೇ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಗೋದಾಮಿನಲ್ಲಿ ದಾಸ್ತಾನು ಮಾಡಿದ್ದಾರೆ. ಮತ್ತೊಂದೆಡೆ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕಪ್ಪುಪಟ್ಟಿಗೆ ಸೇರಿಸಿ: ‘ಗುಣಮಟ್ಟದ ಆಹಾರ ಪದಾರ್ಥ ಪೂರೈಸದ ಟೆಂಡರ್‌ದಾರರ ವಿರುದ್ಧ ಪ್ರಕರಣ ದಾಖಲಿಸಬೇಕು. ಅವರ ಗುತ್ತಿಗೆ ಕರಾರು ರದ್ದುಪಡಿಸಬೇಕು ಮತ್ತು ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಪಡಿತರದಾರರಿಗೆ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಹಿರಿಯ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

‘ಕಳಪೆ ತೊಗರಿ ಬೇಳೆ ವಾಪಸ್ ಕಳುಹಿಸಬೇಕು. ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಗುಣಮಟ್ಟದ ತೊಗರಿ ಬೇಳೆ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಇಲಾಖೆ ಕಚೇರಿ ಮುಂದೆ ಪಡಿತರ ತೊಗರಿ ಬೇಳೆ ಸುರಿದು ಪಡಿತರದಾರರೊಂದಿಗೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ವೆಂಕಟೇಶ್, ತಿಪ್ಪಣ್ಣ, ಅಶೋಕ್, ಅಶ್ವತ್ಥಪ್ಪ, ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.