ADVERTISEMENT

ಅಕಾಲಿಕ ಮಳೆ: ಮಾವು ಬೆಳೆಗಾರರು ಕಂಗಾಲು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 16:05 IST
Last Updated 19 ಫೆಬ್ರುವರಿ 2021, 16:05 IST

ಕೋಲಾರ: ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಮಾವು ಬೆಳೆಗಾರರು ಆತಂಕಗೊಂಡಿದ್ದಾರೆ.

ಬಿರುಗಾಳಿ ಸಹಿತ ಸುರಿದ ಅಕಾಲಿಕ ಮಳೆಗೆ ಮಾವಿನ ಮರಗಳ ಹೂವು ಉದುರಿದ್ದು, ಕೊಂಬೆಗಳು ಮುರಿದು ಬಿದ್ದಿವೆ. ಕಾಯಿ ಕಚ್ಚುವ ಹಂತದಲ್ಲಿದ್ದ ಹೂವು ಗಾಳಿಯ ತೀವ್ರತೆಗೆ ಉದುರಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿ ಹೆಚ್ಚು ಮಾವು ಬೆಳೆಯಿರುವ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಳೆರಾಯ ರೈತರಿಗೆ ಕಣ್ಣೀರು ತರಿಸಿದ್ದಾನೆ.

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಬಿಸಿಲ ತಾಪ ಹೆಚ್ಚಿತ್ತು. ಶುಕ್ರವಾರ ಇಡೀ ದಿನ ಶಕೆಯ ಅನುಭವವಿತ್ತು. ರಾತ್ರಿ 7 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಅರ್ಧ ತಾಸು ಎಡಬಿಡದೆ ಸುರಿಯಿತು. ಹಲವು ತಿಂಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ದಿಢೀರ್ ಪ್ರತ್ಯಕ್ಷವಾಗಿದ್ದಕ್ಕೆ ಜನ ಅಚ್ಚರಿಗೊಂಡರು.

ADVERTISEMENT

ಬಿಸಿಲ ಬೇಗೆಯಿಂದ ಬಸವಳಿದಿದ್ದ ನಗರವಾಸಿಗಳಿಗೆ ಮಳೆ ಹಿತಾನುಭವ ನೀಡಿದರೆ ಮಾವು ಬೆಳೆಗಾರರಿಗೆ ತೊಂದರೆ ಉಂಟು ಮಾಡಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರು ಧಾರಾಕಾರ ಮಳೆಯಿಂದ ಕಂಗಾಲಾಗಿದ್ದಾರೆ.

ಸಂಪರ್ಕ ಕಡಿತ: ಮಳೆಗೆ ಜಿಲ್ಲಾ ಕೇಂದ್ರದಲ್ಲಿ ಚರಂಡಿಗಳು ಹಾಗೂ ಮ್ಯಾನ್‌ಹೋಲ್‌ಗಳು ಕ್ಷಣ ಮಾತ್ರದಲ್ಲಿ ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿದಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಕೆಳಗೆ ಹಾಗೂ ಪೆಟ್ರೋಲ್‌ ಬಂಕ್‌ಗಳ ಬಳಿ ನಿಂತಿದ್ದ ದೃಶ್ಯ ಕಂಡುಬಂತು.

ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ಮಳೆಗೆ ಜಿಲ್ಲಾ ಕೇಂದ್ರದ ರಸ್ತೆಗಳ ಚಿತ್ರಣವೇ ಬದಲಾಯಿತು. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾದವು. ರೈಲ್ವೆ ಕೆಳ ಸೇತುವೆ ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತು ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.