ADVERTISEMENT

ಬೆಲೆ ಕುಸಿತ: ಹೊಲದಲ್ಲೇ ಉಳಿದ ಟೊಮೆಟೊ

ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಅನ್ನದಾತರು ಕಂಗಾಲು

ಜೆ.ಆರ್.ಗಿರೀಶ್
Published 24 ಮಾರ್ಚ್ 2022, 19:30 IST
Last Updated 24 ಮಾರ್ಚ್ 2022, 19:30 IST
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ವಹಿವಾಟಿನ ನೋಟ
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ವಹಿವಾಟಿನ ನೋಟ   

ಕೋಲಾರ: ಜಿಲ್ಲೆಯ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಹಿಂದಿನ ವರ್ಷ ಕೋವಿಡ್‌, ಲಾಕ್‌ಡೌನ್‌ ಹಾಗೂ ಸತತ ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಟೊಮೆಟೊ ಬೆಳೆಗಾರರಿಗೆ ಈಗ ಬೆಲೆ ಇಳಿಕೆಯು ದೊಡ್ಡ ಪೆಟ್ಟು ಕೊಟ್ಟಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಮಾರು 19,930 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಜಿಲ್ಲೆಯಿಂದ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಪ್ರತಿನಿತ್ಯ ಟೊಮೆಟೊ ರಫ್ತಾಗುತ್ತದೆ.

ಸದ್ಯ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆದಿರುವುದರಿಂದ ಜಿಲ್ಲೆಯಿಂದ ರಫ್ತು ಬಹುತೇಕ ಸ್ಥಗಿತಗೊಂಡಿದೆ. ಹೊರ ರಾಜ್ಯಗಳ ವರ್ತಕರು ಸ್ಥಳೀಯ ಮಾರುಕಟ್ಟೆಗೆ ಬಾರದ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದು, ಟೊಮೆಟೊ ಕೇಳುವವರಿಲ್ಲ.

ADVERTISEMENT

ಆವಕ ಹೆಚ್ಚಳ: ಸ್ಥಳೀಯ ಎಪಿಎಂಸಿಗಳಲ್ಲಿ ಟೊಮೆಟೊ ಆವಕ ಗಣನೀಯವಾಗಿ ಹೆಚ್ಚಿದೆ. ಆದರೆ, ಆವಕದ ಪ್ರಮಾಣಕ್ಕೆ ತಕ್ಕಂತೆ ಬೇಡಿಕೆ ಹೆಚ್ಚಿಲ್ಲ. ಜನವರಿ ತಿಂಗಳಲ್ಲಿ ದಿನದ ಟೊಮೆಟೊ ಆವಕ ಪ್ರಮಾಣ ಸರಾಸರಿ 4 ಸಾವಿರ ಕ್ವಿಂಟಾಲ್‌ ಇತ್ತು. ಗುರುವಾರ (ಮಾರ್ಚ್‌ 24) 9,530 ಕ್ವಿಂಟಾಲ್‌ ಟೊಮೆಟೊ ಮಾರುಕಟ್ಟೆಗೆ ಬಂದಿದೆ. ಆವಕ ಹೆಚ್ಚಳವೂ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಜ.24ರಂದು ಸ್ಥಳೀಯ ಎಪಿಎಂಸಿಯಲ್ಲಿ ಟೊಮೆಟೊ ಸಗಟು ದರ ಕ್ವಿಂಟಾಲ್‌ಗೆ ಕನಿಷ್ಠ ₹ 530 ಮತ್ತು ಗರಿಷ್ಠ ₹ 1,460 ಇತ್ತು. ಗುರುವಾರ ಸಗಟು ದರ ಕ್ವಿಂಟಾಲ್‌ಗೆ ಕನಿಷ್ಠ ₹ 270 ಮತ್ತು ಗರಿಷ್ಠ ₹ 670ಕ್ಕೆ ಇಳಿದಿದೆ. ಸಗಟು ಬೆಲೆಗೆ ಅನುಗುಣವಾಗಿ ಚಿಲ್ಲರೆ ಮಾರಾಟ ದರ ಕುಸಿದಿದ್ದು, ಟೊಮೆಟೊ ಕೊಯ್ಲು ಮತ್ತು ಸಾಗಣೆಗೆ ಮಾಡಿದ ಹಣ ಸಹ ರೈತರಿಗೆ ಸಿಗುತ್ತಿಲ್ಲ.

ಬೆಲೆ ಕುಸಿತದ ಕಾರಣಕ್ಕೆ ರೈತರು ಟೊಮೆಟೊ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದು, ಜಮೀನುಗಳಲ್ಲಿ ಟೊಮೆಟೊ ಗಿಡದಲ್ಲೇ ಹಣ್ಣಾಗಿ ಉದುರಿ ಕೊಳೆಯಲಾರಂಭಿಸಿದೆ. ಮತ್ತೆ ಕೆಲ ರೈತರು ಹೊಲದಲ್ಲೇ ಟೊಮೆಟೊ ಬೆಳೆ ನಾಶಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.