ADVERTISEMENT

ಕೋಲಾರ | ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ; ದರ ಏರಿಕೆ ಬಿಸಿ!

ವರಮಹಾಲಕ್ಷ್ಮಿ ಹಬ್ಬ ಇಂದು; ಹೂವು, ಹಣ್ಣು, ಪೂಜಾ ಸಾಮಗ್ರಿ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 6:03 IST
Last Updated 8 ಆಗಸ್ಟ್ 2025, 6:03 IST
ಕೋಲಾರದ ಹಳೆ ಬಸ್‌ ನಿಲ್ದಾಣದ ಮಾರುಕಟ್ಟೆಯಲ್ಲಿ ಹೂವು ಖರೀದಿ ಭರಾಟೆ
ಕೋಲಾರದ ಹಳೆ ಬಸ್‌ ನಿಲ್ದಾಣದ ಮಾರುಕಟ್ಟೆಯಲ್ಲಿ ಹೂವು ಖರೀದಿ ಭರಾಟೆ   
ನಗರದ ಹಲವೆಡೆ ಸಂಚಾರ ದಟ್ಟಣೆ, ಪರದಾಟ | ಮಾರುಕಟ್ಟೆಯಲ್ಲಿ ಪೈಪೋಟಿಯಿಂದ ಮಾರಾಟ | ಮನೆಗಳಲ್ಲಿ ಲಕ್ಷ್ಮಿ ದೇವಿ ಪ್ರತಿಷ್ಠಾಪಿಸಿ ಪೂಜೆ

ಕೋಲಾರ: ಶ್ರಾವಣ ಮಾಸದ ಎರಡನೇ ಹಬ್ಬ ವರಮಹಾಲಕ್ಷ್ಮಿ ಆಚರಣೆಗೆ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸಿದ್ಧತೆ ನಡೆಯುತ್ತಿದ್ದರೆ, ಇತ್ತ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿ ಹಾಗೂ ಇತರ ವಸ್ತುಗಳ ದರ ಏರಿಕೆ ಬಿಸಿ ತಟ್ಟಿದೆ.

ದರ ಏರಿಕೆ ನಡುವೆಯೇ ಗುರುವಾರ ನಗರದಲ್ಲಿ ದಿನವಿಡೀ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಸಡಗರ, ಸಂಭ್ರಮ ಸ್ವಲ್ಪವೂ ಕಡಿಮೆಯಾಗಿಲ್ಲ. ಹಬ್ಬ ಮಾಡಲೇಬೇಕೆಂಬ ಆಶಯದಿಂದ ಚೌಕಾಸಿ ವ್ಯಾಪಾರ ಮಾಡಿ ಹೂವು, ಹಣ್ಣು ಖರೀದಿಸುತ್ತಿದ್ದುದು ಕಂಡು ಬಂತು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿಗೆ ‌ಬಂದಿದ್ದರಿಂದ ಜನದಟ್ಟಣೆ ಉಂಟಾಯಿತು. ಹಳೆ ಬಸ್‌ ನಿಲ್ದಾಣ, ದೊಡ್ಡಪೇಟೆ ಭಾಗದಲ್ಲಿ ವಾಹನ ಹಾಗೂ ಜನರ ಸಂಖ್ಯೆ ಹೆಚ್ಚಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.

ADVERTISEMENT

ನಗರದಲ್ಲಿ ಹಿಂದಿಗಿಂತ‌ಲೂ ಈ ಬಾರಿ ಹೂವು, ಹಣ್ಣು, ಪೂಜಾ ಸಾಮಗ್ರಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಎರಡು ಮೂರು ದಿನಗಳಿಂದ ದೊಡ್ಡಪೇಟೆ, ಬ್ರಾಹ್ಮಣರ ಬೀದಿ, ಹಳೆ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ ವೃತ್ತ, ಕಾಳಿಕಾಂಭ ದೇವಾಲಯ ಬೀದಿ, ಅಮ್ಮವಾರಪೇಟೆ, ಡಿವಿಜಿ ರಸ್ತೆ, ಡೂಂ ಲೈಟ್ ವೃತ್ತ, ಟೇಕಲ್ ರಸ್ತೆ ಬದಿ ಸೇರಿದಂತೆ ಇನ್ನಿತರ ಕಡೆ ಸಾವಿರಕ್ಕೂ ಹೆಚ್ಚು ತಳ್ಳುವ ಕೈ ಗಾಡಿಗಳಲ್ಲಿ ವ್ಯಾಪಾರಿಗಳು ಹಣ್ಣು, ಹೂವು ಮಾರಾಟ ಮಾಡುತ್ತಿರುವುದರಿಂದ ಪೈಪೋಟಿ ಜೋರಾಗಿಯೇ ಇದೆ. ಸಾರ್ವಜನಿಕರು ನಡೆದು ಓಡಾಡಲು ಸಾಧ್ಯವಾಗದಂತೆ ರಸ್ತೆ ಮಧ್ಯಬಾಗದಲ್ಲಿಯೇ ತಳ್ಳುವ ಗಾಡಿ ಇಟ್ಟುಕೊಂಡು ವ್ಯಾಪಾರದಲ್ಲಿ ತೊಡಗಿದ್ದರು.

ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ನಂತರ ಸಾಲು ಸಾಲು ಹಬ್ಬಗಳ ಸರಣಿ‌ ಪ್ರಾರಂಭವಾಗಿರುವುದು ಇದಕ್ಕೆ ಕಾರಣ.

ಸಗಟು ಹೂವಿನ ಮಾರುಕಟ್ಟೆ ಇರುವ ಹಳೆ ಬಸ್‍ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಹೂವಿನ ರಾಶಿ. ಖರೀದಿಗಾಗಿ ಹೆಚ್ಚು ಗ್ರಾಹಕರು ಸೇರಿದ್ದರಿಂದ ಕಾಲು ಇಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು.‌ ಈ ರಸ್ತೆಯಲ್ಲಿ ವಾಹನಗಳ ರಾಶಿ ಇದ್ದು, ಅಡ್ಡದಿಡ್ಡಿ ವಾಹನ ನಿಲ್ಲಿಸಿದ್ದರು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಮೆಕ್ಕೆ ವೃತ್ತದಲ್ಲಿ ಹಳೆ ಬಸ್ ನಿಲ್ದಾಣದ ಕಡೆ ಬರುವ ವಾಹನಗಳನ್ನು ಬ್ಯಾರಿಕೇಡ್ ಹಾಕಿ ತಡೆದರು.

ಕೆ.ಜಿ. ಕಾಕಡಾ ₹ 1 ಸಾವಿರ, ರೋಸ್, ಸೇವಂತಿ ₹ 400 ರಿಂದ 450, ಗುಂಡು ಸೂಜಿ ಮಲ್ಲಿಗೆ ಕೆ.ಜಿಗೆ ₹ 1,200ಕ್ಕೆ ಮಾರಾಟವಾದವು. ಮಾವಿನ ಸೊಪ್ಪು ಒಂದು ಕಟ್ಟಿಗೆ ₹ 20ರಿಂದ 25 ಇತ್ತು.

ರಂಗಮಂದಿರ ಮುಂಭಾಗ, ಎಂ.ಜಿ ವೃತ್ತ ಮತ್ತಿತರೆಡೆ ಮಾರುತ್ತಿದ್ದ ಪ್ಲಾಸ್ಟಿಕ್‍ನ ವಿವಿಧ ಮಾದರಿಯ ಹೂಗಳ ಖರೀದಿಗೂ ಜನರು ಮುಂದಾಗಿದ್ದುದು ಕಂಡು ಬಂತು.

ತರಕಾರಿ ಬೆಲೆಯಲ್ಲಿ ಅಂಥ ವ್ಯತ್ಯಾಸ ಕಂಡು ಬರುತ್ತಿಲ್ಲ. ತೊಗರಿಬೇಳೆ, ಬೆಲ್ಲ, ಅಡುಗೆ ಎಣ್ಣೆ ಬೆಲೆ ಹೆಚ್ಚಿದೆ. ಇನ್ನು ಪೂಜಾ ಸಾಮಗ್ರಿ, ಸೀರೆ, ಬಳೆ, ಅರಿಸಿನ ಕುಂಕುಮ, ಬಟ್ಟಲು ಸೇರಿದಂತೆ ವಿವಿಧ ವಸ್ತುಗಳ ಖರೀದಿ ಮಾಡುತ್ತಿದ್ದು ಕಂಡುಬಂತು.

ಮಹಿಳೆಯರು ಶುಕ್ರವಾರ ಮನೆಗಳಲ್ಲಿ ಲಕ್ಷ್ಮಿ ದೇವಿ ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ಶ್ರದ್ಧಾಭಕ್ತಿಯಿಂದ ಪೂಜಿಸುವ ಪರಂಪರೆ ಇದೆ. ದೇಗುಲಗಳಲ್ಲಿ ವಿಶೇಷ ಪೂಜೆ ‌ನಡೆಯಲಿದೆ.

ಹಬ್ಬಕ್ಕೆ ಬಾಳೆ ದಿಂಡು ಖರೀದಿ
ವರಮಹಾಲಕ್ಷ್ಮಿ ಹಬ್ಬಕ್ಕೆ ಕೋಲಾರ ನಗರದಲ್ಲಿ ಗುರುವಾರ ಬಳೆ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು
ಹಣ್ಣುಗಳ ದರವೂ ಏರಿದ್ದು ಗ್ರಾಹಕರು ಖರೀದಿಯಲ್ಲಿ ತೊಡಗಿದ್ದರು
ಕೋಲಾರದಲ್ಲಿ ಗುರುವಾರ ಸೇವಂತಿ ಹೂವು ಖರೀದಿಯಲ್ಲಿ ತೊಡಗಿದ್ದ ಯುವತಿಯರು
ಪ್ಲಾಸ್ಟಿಕ್‍ನ ವಿವಿಧ ಮಾದರಿಯ ಹೂವುಗಳ ಮಾರಾಟ

ಗಗನಕ್ಕೇರಿದ ಕನಕಾಂಬರ ದರ!

ಸಾಲು ಸಾಲು ಹಬ್ಬಗಳು ಬರುತ್ತಿದ್ದು ಹೂವಿನ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೋಲಾರ ನಗರದ ಹಳೆ ಬಸ್‌ ನಿಲ್ದಾಣ ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ಕೆ.ಜಿ ಕನಕಾಂಬರ ದರ ₹ 4 ಸಾವಿರವರೆಗೆ ಮಾರಾಟವಾಯಿತು. ನಂತರ ₹ 2 ಸಾವಿರಕ್ಕಿಳಿಯಿತು. ಹೆಚ್ಚಿನವರು ₹ 200 ನೀಡಿ 100 ಗ್ರಾಂ ಕನಕಾಂಬರ ಖರೀದಿಸುತ್ತಿದ್ದರು. ಕೆ.ಜಿ ಮಲ್ಲಿಗೆ ಹೂವಿನ ದರ ₹ 1800 ಸಾವಿರ ಇತ್ತು. ಕೆ.ಜಿ ಸೇವಂತಿ ₹ 400 ದರದಲ್ಲಿ ಮಾರಾಟವಾಗುತ್ತಿದೆ. ರೋಜಾ ಆಸ್ಟ್ರೇಲಿಯ ಗೆನೇರಿಯಾ ಚೆಂಡು ಹೂವಿನ ದರವೂ ಹೆಚ್ಚು ಇತ್ತು. ‘ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಜೊತೆಗೆ ಈಚೆಗೆ ಮಳೆ ಹೆಚ್ಚಿದ್ದು ಹೂವಿನ ದರ ಏರಿಕೆಗೆ ಕಾರಣ. ಜಿಲ್ಲೆಯಲ್ಲಿ ಬೆಳೆಯುವ ಹೂವನ್ನು ಹೊರಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಾವು ಬೇರೆ ಕಡೆಯಿಂದ ಹೂವು ತಂದು ಮಾರುತ್ತಿದ್ದೇವೆ’ ಎಂದು ಹೂವು ಮಾರಾಟಗಾರರು ಹೇಳಿದರು.

ಕೆ.ಜಿ ಬಾಳೆಹಣ್ಣಿಗೆ ₹ 130

ವಾರದಿಂದ ಏಲಕ್ಕಿ ಬಾಳೆಹಣ್ಣಿನ ದರ ಏರುತ್ತಲೇ ಇದ್ದು ಈಗ ಕೆ.ಜಿಗೆ ₹ 130 ಆಗಿದೆ. ಗಣೇಶ ಚತುರ್ಥಿ ವೇಳೆಗೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಎಂದು ಬಾಳೆಹಣ್ಣು ವ್ಯಾಪಾರಿಗಳು ಹೇಳಿದರು. ಇತರ ಹಣ್ಣಿನ ದರವೂ ಹೆಚ್ಚಿತ್ತು. ಸೇಬಿನ ದರ ₹ 250 ದಾಳಿಂಬೆ ದರ ₹ 200 ದಾಟಿತ್ತು. ದ್ರಾಕ್ಷಿ ಕೆ.ಜಿಗೆ ₹ 180 ಇತ್ತು.

ತಾವರೆಹೂವಿಗೆ ಬೇಡಿಕೆ

ವರಮಹಾಲಕ್ಷ್ಮಿ ಮೂರ್ತಿಗೆ ಅಲಂಕಾರ ಮಾಡಲು ಬಳಸುವ ತಾವರೆಗೆ ಹೆಚ್ಚಿನ ಬೇಡಿಕೆ ಇತ್ತು. ಒಂದು ಜೊತೆ ತಾವರೆಗೆ ₹50 ರಿಂದ60 ಇತ್ತು. ಕೇದಗೆ ಒಂದು ಕಟ್ಟಿಗೆ ₹ 100 ಅಲಂಕಾರಿಕ ಹೂವಿಗೆ ಒಂದಕ್ಕೆ ₹ 10ರಿಂದ 15 ದರವಿತ್ತು. ಮಾರುಕಟ್ಟೆಯಲ್ಲಿ ವಿಶೇಷವಾಗಿ ಹೂವಿನ ಕಮಾನುಗಳನ್ನು ತಯಾರಿಸಿ ಮಾರುತ್ತಿದ್ದು ಇದರ ಬೆಲೆ ₹ 1500 ನಿಂದ ₹ 5 ಸಾವಿರವರೆಗೆ ಇತ್ತು.

ಫ್ಯಾನ್ಸಿ ಲಕ್ಷ್ಮಿ ವಿಗ್ರಹಕ್ಕೆ ಬೇಡಿಕೆ

ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿ ವಿಗ್ರಹ ತಂದು ಅದನ್ನು ಮತ್ತಷ್ಟು ಹೂವು ಎಲೆಗಳಿಂದ ಸಿಂಗರಿಸಿ ಪೂಜೆ ಮಾಡುವುದು ವಾಡಿಕೆ. ಆದರೆ ಈ ಅಲಂಕೃತ ಲಕ್ಷ್ಮಿ ಬೊಂಬೆ ವಿಗ್ರಹ ಬೆಲೆಯೂ ದುಬಾರಿಯಾಗಿದೆ. ಅರ್ಧ ಅಡಿಯ ಲಕ್ಷ್ಮಿ ವಿಗ್ರಹಕ್ಕೆ ₹ 750ರಿಂದ 1 ಸಾವಿರ ಒಂದು ಅಡಿಯ ವಿಗ್ರಹಕ್ಕೆ ₹ 1200ರಿಂದ 1500ಇದೆ. ಇದಕ್ಕೂ ಎತ್ತರದ ವಿಗ್ರಹದ ಬೆಲೆ ಕನಿಷ್ಠ 2ಸಾವಿರದಿಂದ 4 ಸಾವಿರವರೆಗೆ ನಿಗದಿ ಮಾಡಲಾಗಿದೆ. ಜತೆಗೆ ವಿವಿಧ ಅಲಂಕೃತ ಲಕ್ಷ್ಮಿ ವಿಗ್ರಹದ ಬೆಲೆ ಇನ್ನೂ ಅಧಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.