
ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಬಿ.ಕೆ. ರವಿ ನೇಮಕವಾಗಿದ್ದು, ಶುಕ್ರವಾರ ಇಲ್ಲಿನ ಆಡಳಿತ ಕಚೇರಿಯಲ್ಲಿ ಸಂವಿಧಾನ ಪೀಠಿಕೆ ವಾಚನದ ಮೂಲಕ ಅಧಿಕಾರ ಸ್ವೀಕರಿಸಿದರು.
ಈವರೆಗೆ ಉತ್ತರ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ಪ್ರೊ.ನಿರಂಜನ ವಾನಳ್ಳಿ ಅವರು ನ.30ರಂದು ತಮ್ಮ ನಾಲ್ಕು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಿ ಮಾತೃ ಇಲಾಖೆಗೆ ಮರಳಿದ್ದರು.
ಪ್ರಭಾರ ಕುಲಪತಿ ಆಗಿದ್ದ ವಿಶ್ವವಿದ್ಯಾಲಯದ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದ ಪ್ರೊ.ಡಿ.ಕುಮುದಾ ಅವರಿಂದ ಪ್ರೊ.ರವಿ ಅಧಿಕಾರ ಸ್ವೀಕರಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಸಂವಹ
ನದ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಈ ಹಿಂದೆ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೆಲಸ ಮಾಡಿದ್ದಾರೆ. ಇನ್ನೂ ಕೆಲ ತಿಂಗಳ ಅಧಿಕಾರಾವಧಿ ಇತ್ತು. ಅಷ್ಟರಲ್ಲಿ ಮತ್ತೊಂದು ಅವಕಾಶ ಸಿಕ್ಕಿದ್ದು, ನಾಲ್ಕು ವರ್ಷ ಕುಲಪತಿ ಆಗಿರಲಿದ್ದಾರೆ.
ವಿಶ್ವವಿದ್ಯಾಲಯದ ಮೂರನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಹಿರಿಯ ಅಧಿಕಾರಿಗಳು, ಸಂಯೋಜಿತ ಕಾಲೇಜುಗಳ ಪ್ರಾಂಶುಪಾ
ಲರು ಮತ್ತು ಆಡಳಿತಾತ್ಮಕ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದರು.
ಶೈಕ್ಷಣಿಕ ಆಡಳಿತ, ಎಲ್ಲರ ಒಳಗೊಳ್ಳುವಿಕೆ ಮತ್ತು ಸಾಂಸ್ಥಿಕ ನಿರ್ಣಯ ಕೈಗೊಳ್ಳಲು ಸಂವಿಧಾನವು ನೈತಿಕ ದಿಕ್ಸೂಚಿಯಾಗಿರಬೇಕು ಎಂದು ಹೇಳಿದರು.
ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಸಂವಿಧಾನಾತ್ಮಕ ಮೌಲ್ಯಗಳು ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಕ್ಯಾಂಪಸ್ ಸಂಸ್ಕೃತಿಗೆ ದಾರಿ ತೋರಬೇಕು. ಬೋಧನೆ, ಕಲಿಕೆ ಮತ್ತು ಆಡಳಿತ
ದಲ್ಲಿ ಸಂವಿಧಾನಾತ್ಮಕ ತತ್ವಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ತಮ್ಮ ಮೊದಲ ಸಭೆ ನಡೆಸಿ, ಪ್ರಸ್ತುತ ನಡೆಯುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳು, ಪರೀಕ್ಷಾ ವೇಳಾಪಟ್ಟಿ ಮತ್ತು ಆಡಳಿತಾತ್ಮಕ ಆದ್ಯತೆಗಳನ್ನು ಪರಿಶೀಲಿಸಿದರು. ಪಾರದರ್ಶಕತೆ, ಶೈಕ್ಷಣಿಕ ಸ್ವಾಯತ್ತೆ ಮತ್ತು ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳಿಗೆ ಸಲಹೆ ಸೂಚನೆ ನೀಡಿದರು.
ಸಂಶೋಧನೆ ಬಲಪಡಿಸುವುದು, ಸಂಸ್ಥೆಯ ಶ್ರೇಯಾಂಕವನ್ನು ಉತ್ತಮಪಡಿಸುವುದು, ಕೈಗಾರಿಕೆ ಮತ್ತು ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಕಾರವನ್ನು ವಿಸ್ತರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ತರಗತಿಗಳ ಹೊರಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರನ್ನು ಸಮಾಜದ ಹೊಣೆಗಾರಿಕೆಗಳಿಗೆ ಸಿದ್ಧಪಡಿಸುವಂತೆ ಅಧ್ಯಾಪಕರಿಗೆ ಕಿವಿಮಾತು ಹೇಳಿದರು
ಕುಲಸಚಿವ ಪ್ರೊ.ಲೋಕನಾಥ್, ಹಣಕಾಸು ಅಧಿಕಾರಿ ವಸಂತಕುಮಾರ್, ಮಂಗಸಂದ್ರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ ಇದ್ದರು.
ಮೂವರ ಪೈಪೋಟಿಯಲ್ಲಿ ಮೇಲುಗೈ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಬಯಸಿ ಸುಮಾರು 72 ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರಚಿಸಲಾಗಿದ್ದ ಶೋಧನಾ ಸಮಿತಿಯು ಮೂವರ ಹೆಸರನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ ಪಟ್ಟಿಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ.ಬಿ.ಕೆ.ರವಿ ಅವರಲ್ಲದೇ ಇನ್ನೂ ಇಬ್ಬರ ಹೆಸರು ಇತ್ತು. ಈ ಪಟ್ಟಿಯನ್ನು ಸರ್ಕಾರ ರಾಜ್ಯಪಾಲರ ಅನುಮೋದನೆಗಾಗಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿದ್ದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವಿಶ್ರಾಂತ ಕುಲಪತಿ ಪ್ರೊ.ಕರಿಯಪ್ಪ ನೇತೃತ್ವದ ನಾಲ್ವರು ಸದಸ್ಯರ ಶೋಧನಾ ಸಮಿತಿಯಲ್ಲಿ ಯುಜಿಸಿ ಪ್ರತಿನಿಧಿಯಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಸುತ್ಕರ್ ಜಗದೀಶ್ವರ ರಾವ್ ರಾಜ್ಯಪಾಲರ ಪ್ರತಿನಿಧಿಯಾಗಿ ಮಧ್ಯಪ್ರದೇಶದ ಮಹಾರಾಜ ಛತ್ರಶಾಲಾ ಬುಂದೇಲಖಂಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಆರ್.ಥಾಪಕ್ ಹಾಗೂ ಸಿಂಡಿಕೇಟ್ ಪ್ರತಿನಿಧಿಯಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಇದ್ದರು. ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು) ಉಪಕಾರ್ಯದರ್ಶಿ ಸಮನ್ವಯಕರಾಗಿದ್ದರು.
ಪ್ರೊ.ರವಿ 3ನೇ ಕುಲಪತಿ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ 2017ರಲ್ಲಿ ಆರಂಭವಾಯಿತು. ಇದರ ಮೊದಲ ಕುಲಪತಿಯಾಗಿ ಪ್ರೊ.ಕೆಂಪರಾಜು ಕಾರ್ಯನಿರ್ವಹಿಸಿದ್ದರು. ನಂತರ ಪ್ರೊ.ನಿರಂಜನ ವಾನಳ್ಳಿ ಕುಲಪತಿ ಆಗಿದ್ದರು. ಹೊಸದಾಗಿ ನೇಮಕವಾಗಿರುವ ಪ್ರೊ.ಬಿ.ಕೆ.ರವಿ ಮೂರನೇ ಕುಲಪತಿ. ಪ್ರೊ.ರವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರು. ಹೀಗಾಗಿ ಅವರ ಅದೃಷ್ಟ ಖುಲಾಯಿಸಿದೆ. ಎರಡನೇ ಬಾರಿ ಕುಲಪತಿ ಆಗುವ ಅವಕಾಶ ಸಿಕ್ಕಿದೆ. ಉತ್ತರ ವಿಶ್ವವಿದ್ಯಾಲಯದಲ್ಲಿ ಹಗರಣಗಳ ಆರೋಪ ಹಾಗೂ ವಿವಾದಗಳು ಕೇಳಿ ಬಂದಿದ್ದವು. ಹೀಗಾಗಿ ನೂತನ ಕುಲಪತಿ ಮುಂದೆ ದೊಡ್ಡ ಸವಾಲು ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅಮರಾವತಿಯಲ್ಲಿ ಹೊಸದಾಗಿ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ. ಪೂರ್ಣಗೊಂಡ ನಂತರ ಅಲ್ಲಿಗೆ ಸ್ಥಳಾಂತರವಾಗಲಿದೆ. ಸದ್ಯ ಟಮಕದಲ್ಲಿರುವ ಆಡಳಿತ ಕಚೇರಿಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್‌ಒಯು) ಸೇರಿದ ಕಟ್ಟಡವಾಗಿದ್ದು ಬಾಡಿಗೆಗೆ ಪಡೆಯಲಾಗಿದೆ.