ADVERTISEMENT

ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 13:24 IST
Last Updated 14 ಸೆಪ್ಟೆಂಬರ್ 2019, 13:24 IST

ಕೋಲಾರ: ‘ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಬಡ್ಡಿ, ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳುವ ಅಗತ್ಯವಿದೆ’ ಎಂದು ರಾಜ್ಯ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕೆ.ರಾಜೇಂದ್ರನ್ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ಜಿಲ್ಲಾ ಮಟ್ಟದ ಕಬಡ್ಡಿ ಪ್ರೀಮಿಯರ್ ಲೀಗ್ ತಂಡಗಳ ಆಯ್ಕೆ ಪಂದ್ಯವಾಳಿಗೆ ಚಾಲನೆ ನೀಡಿ ಮಾತನಾಡಿ, ‘ಎದುರಾಳಿ ಎಷ್ಟೇ ಬಲಿಷ್ಠನಾದರೂ ಅವರನ್ನು ಎದುರಿಸುವ ತಾಕತ್ತು ಇರುವುದು ಕ್ರೀಡೆಯಲ್ಲಿ ಮಾತ್ರ’ ಎಂದರು.

‘ಕಬಡ್ಡಿಯು ಇತ್ತೀಚೆಗೆ ಜನಾಕರ್ಷಣೆಯ ಕ್ರೀಡೆಯಾಗಿದೆ. ಅಪ್ಪಟ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಹೊಸ ಅಲೆ ಮೂಲಕ ಜನರ ಮನಸ್ಸು ಆಕರ್ಷಿಸುತ್ತಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಕ್ರೀಡೆಯಲ್ಲಿ ಯಶಸ್ಸು ಸಾಧನೆ ಮಾಡಿದರೆ ಉದ್ಯೋಗ ಸಹ ಸಿಗುತ್ತದೆ’ ಎಂದು ಸಲಹೆ ನೀಡಿದರು.

ADVERTISEMENT

‘ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕ್ರೀಡಾಪಟುಗಳನ್ನು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಬೇಕು’ ಎಂದು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ರಮೇಶ್ ಆಶಿಸಿದರು.

‘ಕ್ರೀಡೆಯೆಂದರೆ ಕ್ರಿಕೆಟ್ ಎಂಬ ಭಾವನೆಯಿದ್ದ ಭಾರತದಲ್ಲಿ ಈಗ ವೀಕ್ಷಕರು ದೇಸಿ ಕ್ರೀಡೆಯಾದ ಕಬಡ್ಡಿಯತ್ತ ಒಲವು ತೋರುತ್ತಿದ್ದಾರೆ. ಕ್ರೀಡಾಪಟುಗಳು ಕ್ರೀಡಾ ನಿಯಮ ಪಾಲಿಸಬೇಕು. ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಬೇಕು’ ಎಂದು ತಿಳಿಸಿದರು.

ಜಿಲ್ಲೆಯ 6 ತಾಲ್ಲೂಕುಗಳ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಈ ಪೈಕಿ ಆಯ್ಕೆ ಸಮಿತಿಯವರು 8 ತಂಡಗಳಾಗಿ ಮಾಡಿ ಉತ್ತಮ ಪ್ರದರ್ಶನ ನೀಡಿದವರನ್ನು ಜಿಲ್ಲಾ ಮಟ್ಟದ ಪ್ರೀಮಿಯರ್ ಲೀಗ್‌ಗೆ ಆಯ್ಕೆ ಮಾಡುತ್ತಾರೆ. ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ್, ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಸೌಂದರ್ ರಾಜ್, ತೀರ್ಪುಗಾರರಾದ ಮಂಜುನಾಥ್, ವಿನಯ್, ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.