ADVERTISEMENT

ಮೂಲ ಸೌಕರ್ಯಕ್ಕಾಗಿ ಮಿಂಚಿನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 2:49 IST
Last Updated 14 ಅಕ್ಟೋಬರ್ 2020, 2:49 IST
ಕೆಜಿಎಫ್ ರಾಬರ್ಟ್‌ಸನ್‌ಪೇಟೆ ನಗರಸಭೆ ಮುಂಭಾಗದಲ್ಲಿ 13ನೇ ವಾರ್ಡಿನ ನಿವಾಸಿಗಳು ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು
ಕೆಜಿಎಫ್ ರಾಬರ್ಟ್‌ಸನ್‌ಪೇಟೆ ನಗರಸಭೆ ಮುಂಭಾಗದಲ್ಲಿ 13ನೇ ವಾರ್ಡಿನ ನಿವಾಸಿಗಳು ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಕೆಜಿಎಫ್‌: ವಾರ್ಡ್‌ನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಆರೋಪಿಸಿ 13ನೇ ವಾರ್ಡ್‌ನ ಸದಸ್ಯರು ಮಂಗಳವಾರ ನಗರಸಭೆ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ವಾರ್ಡ್‌ನಲ್ಲಿ ಎರಡು ವಿದ್ಯಾಸಂಸ್ಥೆಗಳು, ಚರ್ಚ್ ಇವೆ. ಸುಮಾರು 4,000 ಜನಸಂಖ್ಯೆ ಇದೆ. ಆದರೆ ನಗರಸಭೆ ಯಾವುದೇ ರೀತಿಯ ಮೂಲ ಸೌಕರ್ಯ ಒದಗಿಸದೆ ಜನರನ್ನು ವಂಚಿಸುತ್ತಿದೆ ಎಂದು ನಿವಾಸಿಗಳು ದೂರಿದರು.

ಮಳೆ ಬಂದರೆ ರಸ್ತೆ ಹಾಗೂ ಅಕ್ಕಪಕ್ಕದ ಜಾಗದಲ್ಲಿ ನೀರು ತುಂಬಿದೆ. ಅಲ್ಲಿ ಉತ್ಪತ್ತಿಯಾಗುವ ಕ್ರಿಮಿ ಕೀಟಗಳು ಮನೆಯನ್ನು ಆವರಿಸುತ್ತದೆ. ನಗರಸಭೆಯ ಸ್ವಚ್ಛತಾ ಸಿಬ್ಬಂದಿ ವಾರ್ಡ್‌ಗೆ ಬರುವುದಿಲ್ಲ. ನಗರಸಭೆ ಸದಸ್ಯರ ಮಾತನ್ನು ನಗರಸಭೆ ಸಿಬ್ಬಂದಿ ಆಲಿಸುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ADVERTISEMENT

ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಆರು ತಿಂಗಳಿಂದ ಕೆಟ್ಟು ಹೋದ ಬೀದಿ ದೀಪಗಳನ್ನು ದುರಸ್ತಿ ಮಾಡಿಲ್ಲ. ರಾತ್ರಿ ಹೊತ್ತು ಓಡಾಡುವುದು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ತೊಂದರೆ ಇನ್ನೂ ಹೆಚ್ಚಾಗಿದೆ ಎಂದು ನಿವಾಸಿಗಳು ದೂರಿದರು.

ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ನಗರಸಭೆ ಆಯುಕ್ತೆ ಸರ್ವರ್ ಮರ್ಚೆಂಟ್‌, ವಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ತೊಂದರೆಯಾಗಿದೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.