ADVERTISEMENT

ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಪಡಿತರ ವ್ಯವಸ್ಥೆ ಬುಡಮೇಲು ಮಾಡುವ ಹುನ್ನಾರ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:59 IST
Last Updated 10 ಮಾರ್ಚ್ 2021, 2:59 IST
ಕೆಜಿಎಫ್ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಪ್ರಾಂತ್ಯ ರೈತ ಸಂಘದ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ಕೆಜಿಎಫ್ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಪ್ರಾಂತ್ಯ ರೈತ ಸಂಘದ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು   

ಕೆಜಿಎಫ್‌: ಚುನಾವಣೆಯಲ್ಲಿ ರೈತರ ಪರವಾಗಿ ಮಾತನಾಡಿದ್ದ ರಾಜ್ಯ ಸರ್ಕಾರ ಈಗ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ವಿಫಲವಾಗಿದೆ ಎಂದು ದೂರಿ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ
ನಡೆಸಿದರು.

ನಗರಸಭೆ ಸದಸ್ಯ ಪಿ.ತಂಗರಾಜ್‌ ಮಾತನಾಡಿ, ‘ನಾವು ಗೆದ್ದು ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ, ರೈತರ ಬೆಳೆಗೆ ಉತ್ತಮ ಬೆಲೆ ಕೊಡುತ್ತೇವೆ. ಬಗರಂ ಹುಕುಂ ಸಾಗುವಳಿ ಚೀಟಿ ವಿತರಿಸುತ್ತೇವೆ. ಬಡವರಿಗೆ ನಿವೇಶನಗಳನ್ನು ನೀಡುತ್ತೇವೆ ಎಂಬ ರೀತಿಯಲ್ಲಿ ಹಲವಾರು ಆಶ್ವಾಸನೆ ನೀಡಲಾಯಿತು. ಅವರ ಮಾತನ್ನು ನಂಬಿದ ಜನ ಅವರಿಗೆ ಮತ ಹಾಕಿ ಅಧಿಕಾರಕ್ಕೆ ತಂದರು. ಆದರೆ ಸರ್ಕಾರ ಬಂಡವಾಳಶಾಹಿಗಳ ಜೊತೆಗೆ ರಾಜಿ ಮಾಡಿಕೊಂಡಿದ್ದಾರೆ. ಕಾರ್ಪೋರೇಟ್‌ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆ. ರೈತರನ್ನು ಜೀತದಾಳುಗಳನ್ನಾಗಿ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ಪಡಿತರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರ ನಡೆಸಿದೆ. ಕೃಷಿಯನ್ನು ದುಬಾರಿ ಉದ್ಯಮವನ್ನಾಗಿ ಮಾಡಲು ಹೊರಟಿದೆ. ಎಲ್ಲವನ್ನೂ ಖಾಸಗಿಯವರ ಕೈಗೆ ಒಪ್ಪಿಸಿ, ಬಡವರು, ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದೆ. ಈಗ ಗೋಹತ್ಯೆ ನಿಷೇಧ ಕಾಯ್ದೆ ತಂದಿದೆ. ಗೋವಿಗೆ 13 ವರ್ಷ ತುಂಬಿದರೆ ಮಾತ್ರ ಮಾರಾಟ ಮಾಡಬಹುದು. ಕೃಷಿಕರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಸ್ವಾತಂತ್ರ್ಯ ಇರುವುದಿಲ್ಲ. ದನದ ಮಾಂಸ ತಿನ್ನುವ ವರ್ಗಕ್ಕೆ ಅನ್ಯಾಯ ಮಾಡಲು ಹೊರಟಿದೆ’ ಎಂದು ತಂಗರಾಜ್‌
ದೂರಿದರು.

ADVERTISEMENT

ತಹಶೀಲ್ದಾರ್ ಕೆ.ಎನ್‌.ಸುಜಾತ ಅವರಿಗೆ ಬೇಡಿಕೆಯ ಪಟ್ಟಿಯನ್ನು ನೀಡಲಾಯಿತು. ಮುಖಂಡರಾದ ಕೆ.ಎಂ.ವೆಂಕಟೇಶ, ಕೆ.ಎನ್‌.ಮುನಿವೆಂಕಟೇಗೌಡ, ರಾಜಾರೆಡ್ಡಿ, ಪಿ.ರಾಮಮೂರ್ತಿ, ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.