ADVERTISEMENT

ಚಾಲಕರು ಅಪಘಾತರಹಿತ ಸೇವೆ ನೀಡಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:19 IST
Last Updated 9 ಜುಲೈ 2020, 14:19 IST
ಕೋಲಾರದಲ್ಲಿ ಗುರುವಾರ ನಡೆದ ಜಿಲ್ಲಾ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ ವಾರ್ಷಿಕೋತ್ಸವ ಹಾಗೂ ಆರ್ಬಿಟ್ ಪ್ರಥಮ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಚಾಲಕರಿಗೆ ಗುರುತಿನ ಚೀಟಿ ವಿತರಿಸಿದರು.
ಕೋಲಾರದಲ್ಲಿ ಗುರುವಾರ ನಡೆದ ಜಿಲ್ಲಾ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ ವಾರ್ಷಿಕೋತ್ಸವ ಹಾಗೂ ಆರ್ಬಿಟ್ ಪ್ರಥಮ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಚಾಲಕರಿಗೆ ಗುರುತಿನ ಚೀಟಿ ವಿತರಿಸಿದರು.   

ಕೋಲಾರ: ‘ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಾಹನ ಚಾಲಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅಪಘಾತರಹಿತ ಸೇವೆ ನೀಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಇಲ್ಲಿ ಗುರುವಾರ ನಡೆದ ಜಿಲ್ಲಾ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ ವಾರ್ಷಿಕೋತ್ಸವ ಹಾಗೂ ಆರ್ಬಿಟ್ ಪ್ರಥಮ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಆದ್ದರಿಂದ, ಚಾಲಕರು ಕಟ್ಟುನಿಟ್ಟಾಗಿ ಸಂಚಾರ ನಿಯಮ ಪಾಲಿಸಬೇಕು’ ಎಂದು ತಿಳಿಸಿದರು.

‘ಮೋಟಾರು ವಾಹನ ಕಾಯ್ದೆ ನಂತರ ಸಾರಥಿ–4 ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿ ವಾಹನ ಚಾಲನಾ ಪ್ರಮಾಣಪತ್ರ (ಡಿ.ಎಲ್‌), ತರಬೇತಿ ಪ್ರಮಾಣಪತ್ರ ಪಡೆಯುವ ಬಗ್ಗೆ ಜನರಿಗೆ ಮಾಹಿತಿ ಇಲ್ಲದೆ ತೊಂದರೆಯಾಗಿದೆ. ಸಾರಿಗೆ ಇಲಾಖೆಯಿಂದ ತರಬೇತಿ ಶಿಬಿರ ಆಯೋಜಿಸಿ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಒತ್ತಾಯಿಸಿದರು,

ADVERTISEMENT

‘ನಗರದಲ್ಲಿ ಆರ್ಬಿಟ್ ಪ್ರಥಮ ಚಿಕಿತ್ಸಾ ಕೇಂದ್ರ ಆರಂಭವಾಗುತ್ತಿರುವುದು ಶ್ಲಾಘನೀಯ. ಚಾಲಕರಿಗೆ ಡಿ.ಎಲ್‌ ಮಾಡಿಸಿಕೊಡಲು ಸಂಘ ಉತ್ತಮ ಸೇವೆ ಸಲ್ಲಿಸುತ್ತಿದೆ. ಡಿ.ಎಲ್ ಮಾಡಿಸಿಕೊಳ್ಳುವ ಬಗ್ಗೆ ಮೆಕಾನಿಕ್‌ಗಳಿಗೆ ಆನ್‌ಲೈನ್‌ ಟೆಸ್ಟ್‌ನಲ್ಲಿ ಆಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಆರ್‌ಟಿಒ ಹಿರಿಯ ನಿರೀಕ್ಷಕ ಡಿ.ಬಿ.ನಾಗರಾಜ್ ಭರವಸೆ ನೀಡಿದರು.

ಸದಸ್ಯತ್ವ ಪಡೆಯಿರಿ: ‘ಕೊರೊನಾ ಸೋಂಕಿನ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಸಂಸ್ಥೆಯು ಜಿಲ್ಲೆಯಲ್ಲಿ ಮಾದರಿ ಸೇವೆ ಸಲ್ಲಿಸಿದೆ. ಸಂಸ್ಥೆಯು ಜಿಲ್ಲೆಯಲ್ಲಿ ಈವರೆಗೆ 12 ಸಾವಿರ ಆರೋಗ್ಯ ವರ್ಧಕ ಪಾನೀಯ, 20 ಸಾವಿರ ಸ್ಯಾನಿಟೈಸರ್ ಮತ್ತು 1.50 ಲಕ್ಷ ಮಾಸ್ಕ್‌ ವಿತರಿಸಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ಅಜೀವ ಸದಸ್ಯತ್ವ ಪಡೆಯಬೇಕು’ ಎಂದು ರೆಡ್‌ಕ್ರಾಸ್‌ ಸಂಸ್ಥೆ ಮುಖ್ಯಸ್ಥ ಗೋಪಾಲಕೃಷ್ಣ ಮನವಿ ಮಾಡಿದರು.

ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್, ಪ್ರಧಾನ ಕಾರ್ಯದರ್ಶಿ ಬೈಚೇಗೌಡ, ಕಾರ್ಯದರ್ಶಿ ಚಿದಂಬರ್, ಖಜಾಂಚಿ ಷೇಕ್ ಜಮೀರ್, ಸಹ ಕಾರ್ಯದರ್ಶಿ ಮುನಿನಾರಾಯಣ ಪಾಲ್ಗೊಂಡರು.----

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.