ADVERTISEMENT

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ: ಎಸ್.ಎಂ.ರೂಪಾ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 12:48 IST
Last Updated 10 ಜುಲೈ 2021, 12:48 IST
ಕೋಲಾರ ತಾಲ್ಲೂಕಿನ ನಾಗಲಾಪುರ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಗ್ರಾಮದಲ್ಲಿ ಶನಿವಾರ ದಾಖಲಾತಿ ಆಂದೋಲನ ನಡೆಸಲಾಯಿತು
ಕೋಲಾರ ತಾಲ್ಲೂಕಿನ ನಾಗಲಾಪುರ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಗ್ರಾಮದಲ್ಲಿ ಶನಿವಾರ ದಾಖಲಾತಿ ಆಂದೋಲನ ನಡೆಸಲಾಯಿತು   

ಕೋಲಾರ: ‘ಮಕ್ಕಳನ್ನು ಶಾಲೆಗೆ ಸೆಳೆಯಲು ಶಾಲಾ ದಾಖಲಾತಿ ಆಂದೋಲನ ನಡೆಸಬೇಕು. ಯಾವುದೇ ಮಗು ಕಲಿಕೆಯಿಂದ ವಂಚಿತವಾಗಬಾರದು’ ಎಂದು ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ಸದಸ್ಯೆ ಎಸ್.ಎಂ.ರೂಪಾ ಹೇಳಿದರು.

ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಶನಿವಾರ ಆರಂಭಿಸಲಾದ 2021-22ನೇ ಸಾಲಿನ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ‘ಸರ್ಕಾರಿ ಶಾಲೆಗಳು ಸುಸಜ್ಜಿತ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಜತೆಗೆ ಸಂಸ್ಕಾರ ಕಲಿಸುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು’ ಎಂದು ಮನವಿ ಮಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕರು ದೇಶದ ಮಹಾನ್ ನಾಯಕರು, ವಿಜ್ಞಾನಿಗಳು, ಎಂಜಿನಿಯರ್‌ ಆಗಿದ್ದಾರೆ. ಸರ್ಕಾರಿ ಶಾಲೆಗಳ ಕುರಿತು ನಿರ್ಲಕ್ಷ್ಯ ಬೇಡ. ಕೋವಿಡ್‌ನಿಂದ ಮಕ್ಕಳು ಈಗಾಗಲೇ ಕಲಿಕೆಯಿಂದ ವಂಚಿತರಾಗಿದ್ದಾರೆ. ಅವರಲ್ಲಿ ಮತ್ತೆ ಕಲಿಕಾಸಕ್ತಿ ಬೆಳೆಸುವ ಜವಾಬ್ದಾರಿ ಶಿಕ್ಷಕರದು. ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ಮುಂದಾಗಿ’ ಎಂದು ಸಲಹೆ ನೀಡಿದರು.

ADVERTISEMENT

‘ಖಾಸಗಿ ಶಾಲೆಗಳಿಗಿಂತ ಮುನ್ನವೇ ಅನೇಕ ಸರ್ಕಾರಿ ಶಾಲಾ ಶಿಕ್ಷಕರು ಮಕ್ಕಳಿಗೆ ಈಗಾಗಲೇ ಆನ್‌ಲೈನ್ ಬೋಧನೆ ಆರಂಭಿಸಿದ್ದಾರೆ. ಹಲವೆಡೆ ಶಿಕ್ಷಕರು ಮನೆಗಳಿಗೆ ತೆರಳಿ ಮಕ್ಕಳ ಕಲಿಕೆ ಪರಿಶೀಲಿಸುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ಪೋಷಕರು ಖಾಸಗಿ ಶಾಲೆಗಳಿಗೆ ವಂತಿಗೆ ಕಟ್ಟಲು ಹೆಣಗಾಡಬೇಡಿ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಹೇಳಿದರು.

‘ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಕೋವಿಡ್‌ ಆತಂಕದ ನಡುವೆಯೂ ಸರ್ಕಾರ ಶಾಲೆ ಆರಂಭಕ್ಕೆ ಆದೇಶಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ಮುಖ್ಯ. ಈ ವಿಚಾರದಲ್ಲಿ ಶಿಕ್ಷಕರು ನಿರ್ಲಕ್ಷ್ಯ ತೋರಬಾರದು. ಅದೇ ರೀತಿ ಶಿಕ್ಷಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು’ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಶಾಲಾ ಶಿಕ್ಷಕರಾದ ನಾರಾಯಣಸ್ವಾಮಿ, ರಾಜೇಶ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.