ADVERTISEMENT

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 18:14 IST
Last Updated 22 ಜೂನ್ 2021, 18:14 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು ವಿವಿಧ ಗ್ರಾಮಗಳಲ್ಲಿ ಮಂಗಳವಾರ ದಾಖಲಾತಿ ಆಂದೋಲನ ನಡೆಸಿದರು
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು ವಿವಿಧ ಗ್ರಾಮಗಳಲ್ಲಿ ಮಂಗಳವಾರ ದಾಖಲಾತಿ ಆಂದೋಲನ ನಡೆಸಿದರು   

ಕೋಲಾರ: ‘ಸರ್ಕಾರಿ ಶಾಲೆಗಳು ಸಕಲ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಬೇಕು’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಸಚ್ಚಿದಾನಂದಮೂರ್ತಿ ಮನವಿ ಮಾಡಿದರು.

ಶಾಲೆ ವತಿಯಿಂದ ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರ ನಡೆಸಿದ ದಾಖಲಾತಿ ಆಂದೋಲನದಲ್ಲಿ ಮಾತನಾಡಿ, ‘ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಗಾಗಲೇ ಆನ್‌ಲೈನ್ ಬೋಧನೆ ಆರಂಭಿಸಲಾಗಿದೆ. ಜತೆಗೆ ಕನ್ನಡ, ಆಂಗ್ಲ ಮಾಧ್ಯಮ ಬೋಧನಾ ವ್ಯವಸ್ಥೆಯಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು’ ಎಂದರು.

‘ಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಗುಣಮಟ್ಟದ ಬೋಧನೆಯಿಂದ ಶೇ 100 ಫಲಿತಾಂಶ ಬರುತ್ತಿದೆ. ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಇ-ವಿದ್ಯಾ ಕಲಿಕಾ ಸೌಲಭ್ಯವಿದೆ. ಖಾಸಗಿ ಶಾಲೆಗಳಲ್ಲಿ ಕೋವಿಡ್ ಸಂದರ್ಭದಲ್ಲಿ ವಂತಿಗೆ ಪಾವತಿಗೆ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದೀರಿ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಕೊಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

ಅರಾಭಿಕೊತ್ತನೂರು, ಮಂಗಸಂದ್ರ, ಚೌಡದೇನಹಳ್ಳಿ, ಮಡೇರಹಳ್ಳಿ, ಬೆತ್ತನಿ, ಚುಂಚುದೇನಹಳ್ಳಿ ಚೆಲುವನಹಳ್ಳಿ, ನಾಗಲಾಪುರ, ಕೆಂದಟ್ಟಿ, ಚಿಕ್ಕಅಯ್ಯೂರು ಗ್ರಾಮದಲ್ಲಿ ದಾಖಲಾತಿ ಅಭಿಯಾನ ನಡೆಯಿತು. ಶಾಲೆಯ ಶಿಕ್ಷಕರಾದ ಭವಾನಿ, ವೆಂಕಟರೆಡ್ಡಿ, ಲೀಲಾ, ಶ್ವೇತಾ, ಸುಗುಣಾ, ಫರೀದಾ, ಶ್ರೀನಿವಾಸಲು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.