ADVERTISEMENT

2 ಕುಟುಂಬಕ್ಕೆ ಕ್ವಾರಂಟೈನ್‌: ಕಟ್ಟೆಚ್ಚರ

ನರಸಾಪುರ– ವೇಮಗಲ್‌ನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಓಡಾಟ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 14:21 IST
Last Updated 8 ಏಪ್ರಿಲ್ 2020, 14:21 IST
ಕೋಲಾರ ತಾಲ್ಲೂಕಿನ ವೇಮಗಲ್‌ನ ಸ್ವಯಂ ಸೇವಕರು ಕೊರೊನಾ ಸೋಂಕಿನ ಭೀತಿಯ ಕಾರಣಕ್ಕೆ ಗ್ರಾಮದ ಪ್ರವೇಶ ಭಾಗದಲ್ಲಿ ವಾಹನಗಳನ್ನು ತಡೆದು ವಾಪಸ್‌ ಕಳುಹಿಸುತ್ತಿರುವುದು.
ಕೋಲಾರ ತಾಲ್ಲೂಕಿನ ವೇಮಗಲ್‌ನ ಸ್ವಯಂ ಸೇವಕರು ಕೊರೊನಾ ಸೋಂಕಿನ ಭೀತಿಯ ಕಾರಣಕ್ಕೆ ಗ್ರಾಮದ ಪ್ರವೇಶ ಭಾಗದಲ್ಲಿ ವಾಹನಗಳನ್ನು ತಡೆದು ವಾಪಸ್‌ ಕಳುಹಿಸುತ್ತಿರುವುದು.   

ಕೋಲಾರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಯಲು ನರಸಾಪುರ ಗ್ರಾಮದ ಕೊರೊನಾ ಸೋಂಕಿತ ವ್ಯಕ್ತಿಯು ಜಿಲ್ಲೆಯ ನರಸಾಪುರ ಮತ್ತು ವೇಮಗಲ್‌ ಗ್ರಾಮಕ್ಕೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈ ಭಾಗದಲ್ಲಿ ಹೆಚ್ಚುವರಿಯಾಗಿ ಚೆಕ್‌ಪೋಸ್ಟ್‌ ಸ್ಥಾಪಿಸಿ ತೀವ್ರ ಕಟ್ಟೆಚ್ಚರ ವಹಿಸಿದೆ.

ಕೊರೊನಾ ಸೋಂಕಿತ ವ್ಯಕ್ತಿಯ ಮೊಬೈಲ್‌ ಕರೆಗಳ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದ್ದು, ಆತ ನರಸಾಪುರದಲ್ಲಿ ಸುಮಾರು 1 ತಾಸು ಹಾಗೂ ವೇಮಗಲ್‌ನಲ್ಲಿ 15 ಸೆಕೆಂಡ್‌ ಇದ್ದ ಸಂಗತಿ ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ಪ್ರಾಥಮಿಕವಾಗಿ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ 2 ಕುಟುಂಬಗಳ ಸುಮಾರು 15 ಮಂದಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಪತ್ತೆ ಹಚ್ಚಿದ್ದಾರೆ. ಈ 15 ಮಂದಿಯ ಕಫಾ ಹಾಗೂ ರಕ್ತ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ.

ADVERTISEMENT

ಮುನ್ನೆಚ್ಚರಿಕೆ ಕ್ರಮವಾಗಿ ಈ ಎರಡೂ ಕುಟುಂಬಗಳ ಸದಸ್ಯರನ್ನು ಅವರ ಮನೆಗಳಲ್ಲೇ ಪ್ರತ್ಯೇಕ ನಿಗಾದಲ್ಲಿ (ಕ್ವಾರಂಟೈನ್‌) ಇರಿಸಲಾಗಿದೆ. ಜತೆಗೆ ಮನೆಗಳ ಮುಂಭಾಗದಲ್ಲಿ ಕ್ವಾರಂಟೈನ್‌ನ ನೋಟಿಸ್‌ ಪ್ರತಿ ಅಂಟಿಸಲಾಗಿದೆ. ಕುಟುಂಬ ಸದಸ್ಯರು ಹೊರ ಹೋಗದಂತೆ ಕಣ್ಗಾವಲು ಇಡಲು ಹಾಗೂ ಅವರ ಆರೋಗ್ಯ ತಪಾಸಣೆಗಾಗಿ ಮನೆಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.

ವೇಮಗಲ್‌ ಮತ್ತು ನರಸಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪ್ರವೇಶ ಭಾಗದಲ್ಲೇ ಪೊಲೀಸರು ಬ್ಯಾರಿಕೇಡ್‌ ಹಾಕಿ ಚೆಕ್‌ಪೋಸ್ಟ್‌ ಆರಂಭಿಸಿದ್ದಾರೆ. ಚೆಕ್‌ಪೋಸ್ಟ್‌ಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಗ್ರಾಮಗಳಿಗೆ ಬರುವ ಪ್ರತಿ ವಾಹನವನ್ನು ತಡೆದು ವಾಹನ ಸವಾರರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಈ 2 ಕುಟುಂಬಗಳ ಸದಸ್ಯರು ಮತ್ತಷ್ಟು ಜನರನ್ನು ಸಂಪರ್ಕಿಸಿರುವ ಮಾಹಿತಿಯಿದ್ದು, ಅವರ ಪತ್ತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ನರಸಾಪುರ ಮತ್ತು ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.

ಭಯಭೀತರಾದ ಜನ: ನರಸಾಪುರ ಮತ್ತು ವೇಮಗಲ್‌ನ ಜನರು ಕೊರೊನಾ ಸೋಂಕಿತ ವ್ಯಕ್ತಿಯು ತಮ್ಮ ಗ್ರಾಮಕ್ಕೆ ಬಂದು ಹೋಗಿರುವ ಸಂಗತಿ ತಿಳಿದು ಭಯಭೀತರಾಗಿದ್ದಾರೆ. ಗ್ರಾಮದ ಯುವಕರು ಹಾಗೂ ಸ್ವಯಂ ಸೇವಕರು ಗ್ರಾಮದ ಪ್ರವೇಶ ಭಾಗದಲ್ಲೇ ಪಾಳಿಯಲ್ಲಿ ಕಾವಲು ಕಾಯಲಾರಂಭಿಸಿದ್ದಾರೆ. ಅಪರಿಚಿತರು ಹಾಗೂ ಬೇರೆ ಊರಿನ ಜನರನ್ನು ಗ್ರಾಮದ ಪ್ರವೇಶ ಭಾಗದಲ್ಲೇ ತಡೆದು ವಾಪಸ್‌ ಕಳುಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.