
ಕೋಲಾರ: ‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ; ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರೇ ಸ್ಪರ್ಧಿಸಿದರೂ ನಾನು ಹೆದರಲ್ಲ. ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಶತಸಿದ್ಧ’ ಎಂದು ಮಾಜಿ ಸಚಿವ, ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಆರ್.ಪ್ರಕಾಶ್ ಹೇಳಿದರು.
ನಗರ ಹೊರವಲಯದ ಕೋಗಿಲಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಗೆಲುವಿನ ಮತಗಳ ಅಂತರ 10 ಸಾವಿರ ಕಡಿಮೆಯಾಗಬಹುದು ಅಷ್ಟೆ. ನನ್ನ ಒಂದು ಕರೆಗೆ 25 ಸಾವಿರ ಜನ ಸೇರುತ್ತಾರೆ, ಸೋಮವಾರವೇ 25 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡಿದರೆ ಇದನ್ನು ನೋಡಿ ಸಿದ್ದರಾಮಯ್ಯ ವಾಪಸ್ಸು
ಹೋಗುತ್ತಾರೆ. ಅದರಿಂದ ನಮಗೇ ನಷ್ಟವಾಗುತ್ತದೆ. ಅವರು ಕೋಲಾರದಲ್ಲಿ ಸ್ಪರ್ಧಿಸಲಿ’ ಎಂದು
ಹೇಳಿದರು.
‘ಅವರು ಇಲ್ಲಿ ಸ್ಪರ್ಧಿಸಿdರೆ ಬೇರೆ ಬೇರೆ ಪಕ್ಷಗಳ ನಾಯಕರೂ ನನಗೆ ಸಹಾಯ ಮಾಡುತ್ತಾರೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಭಯಪಡದೆ ಗ್ರಾಮಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ’ ಎಂದರು.
‘ಸಿದ್ದರಾಮಯ್ಯ ಅವರಿಗೆ ಪುತ್ರ ವ್ಯಾಮೋಹವಿದೆ. ಪುತ್ರನೂ ಶಾಸಕನಾಗಬೇಕು, ವರ್ತೂರ್ ಪ್ರಕಾಶ್ ಹಾಳಾಗಬೇಕು, ಇನ್ನೊಂದು ಕಡೆ ಸಮಾಜವೂ ಹಾಳಾಗಬೇಕು ಎಂಬುದು ಅವರ ತಂತ್ರ. ಅವರ ಭವಿಷ್ಯ ಈ ಚುನಾವಣೆಯಲ್ಲಿ ನಿರ್ಧಾರವಾಗುತ್ತದೆ. ಕೋಲಾರ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಏಕೆ
ಸೋತರು? ಬಾದಾಮಿಯಲ್ಲಿ ಸಾವಿರಾರು ಕೋಟಿ ಕೆಲಸ ಮಾಡಿದರೂ ಅಲ್ಲಿ ಏಕೆ ಸ್ಪರ್ಧಿಸುತ್ತಿಲ್ಲ? ಅಲ್ಲಿ ಸ್ಪರ್ಧಿಸಿದರೆ ಠೇವಣಿಯೂ ಬರುವುದಿಲ್ಲ’ ಎಂದು ಲೇವಡಿ
ಮಾಡಿದರು.
‘ಮಾರ್ಚ್‌ನಲ್ಲಿ ಒಂದು ಲಕ್ಷ ಕಾರ್ಯಕರ್ತರು ಸೇರಿಸಿ ಅದ್ದೂರಿ ಕಾರ್ಯಕ್ರಮ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸೋಣ’ ಎಂದು ಹೇಳಿದರು.
‘ಮುಖ್ಯಮಂತ್ರಿ ನನಗೆ ಕರೆ ಮಾಡಿ ಬಜೆಟ್‌ನಲ್ಲಿ ಕೋಲಾರಕ್ಕೆ ಏನೇನು ಬೇಕೆಂದು ಪಟ್ಟಿ ಕೇಳಿದ್ದಾರೆ. ಕೋಲಾರಕ್ಕೆ ರಿಂಗ್ ರಸ್ತೆ ನಿರ್ಮಿಸಿ, ಎಪಿಎಂಸಿ ದೊಡ್ಡ ಮಾರುಕಟ್ಟೆ ಸ್ಥಳಾಂತರಿಸಿ ಮತ್ತಷ್ಟು ವಿಸ್ತರಿಸಲಾಗುವುದು. ಈ ಬಾರಿಯ ಬಜೆಟ್‌ನಲ್ಲೇ ಘೋಷಿಸುತ್ತಾರೆ’ ಎಂದರು.
ಬಿಜೆಪಿ ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಪ್ರಸಾದ್. ಬಂಕ್ ಮಂಜುನಾಥ್. ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಸೋಲೂರು ಆಂಜನಪ್ಪ. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.