
ಕೋಲಾರ: ಜಿಲ್ಲೆಯ ಕೆಜಿಎಫ್ ನಗರದಲ್ಲಿ ರೈಲ್ವೆ ಕೋಚ್ ಸರ್ವೀಸಿಂಗ್ ಘಟಕ ಸ್ಥಾಪಿಸಲು ಬಿಜಿಎಂಎಲ್‍ಗೆ ಸೇರಿದ 500 ಎಕರೆ ಜಾಗ ಬಳಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಸಿಗಲಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
ತಾಲ್ಲೂಕಿನ ಚಿಟ್ನಹಳ್ಳಿಯ ತೊಟ್ಲಿ ಗೇಟ್‍ನಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುವಾರ ನಡೆದ ಮಂಡಲ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ರೈಲ್ವೆ ಕೋಚ್ ಸರ್ವೀಸಿಂಗ್ ಘಟಕ ಚೆನ್ನೈಗೆ ಹೋಗುವುದಿತ್ತು. ಕರ್ನಾಟಕದಲ್ಲಿ 500 ಎಕರೆ ಜಮೀನು ಸಿಗಲಿಲ್ಲ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವರು, ರಾಜ್ಯ ಸಚಿವರನ್ನು ಭೇಟಿಯಾದೆ. ಭಾರತ್ ಚಿನ್ನದ ಗಣಿಗೆ ಸೇರಿದ 500 ಎಕರೆ ಜಾಗ ಬಳಸಿಕೊಳ್ಳಲು ತಿಳಿಸಿದ್ದು, ಒಪ್ಪಿಗೆ ಸಿಗಲಿದೆ ಎಂದರು.
ಜಿಲ್ಲೆಯಲ್ಲಿ ರೈಲ್ವೆ ಮಾರ್ಗ ಹಾದುವ ಹೋಗುವ ಕ್ರಾಸಿಂಗ್ ಲೆವೆಲ್‌ಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಸ್ಪಂದಿಸಿದ್ದು, ಐದು ಕಡೆ ಮೇಲ್ಸೇತುವೆ ಕಾಮಗಾರಿ ನಡೆಯಲಿದೆ. ನಗರ ಹೊರವಲಯದ ಸ್ಯಾನಿಟೋರಿಯಂ ಬಳಿ, ನಗರದ ಟೇಕಲ್ ರಸ್ತೆ ವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ, ಬಂಗಾರಪೇಟೆ ಎಸ್‍ಎನ್ ರೆಸಾರ್ಟ್ ಬಳಿ, ದೇಶಿಹಳ್ಳಿ ಹಾಗೂ ಕಾಮಸಮುದ್ರ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ ಎಂದು ಹೇಳಿದರು.
ಕೋಲಾರದಿಂದ ಬೆಂಗಳೂರಿಗೆ ನೇರು ರೈಲು ಮಾರ್ಗ ನಿರ್ಮಾಣ ತಮ್ಮ ಕನಸಾಗಿದ್ದು, ಇದಕ್ಕೆ ಸಚಿವರಿಂದ ಸೂಕ್ತ ಸ್ಪಂದನೆ ಸಿಕ್ಕಿದೆ. ರಾಜ್ಯ ಸರ್ಕಾರ ಜಮೀನು ನೀಡಿದ ಕೂಡಲೇ ಕಾಮಗಾರಿ ಆರಂಭಿಸಲು ಕ್ರಮವಹಿಸಲಾಗುವುದು ಎಂದರು.
ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ‘ರಾಜ್ಯ ಸರ್ಕಾರ ಕೆಲವು ಶಾಸಕರಿಗೆ ವಿಶೇಷ ಅನುದಾನ ನೀಡಿದೆ. ನಾವು ಶಾಸಕರಲ್ಲವೇ? ಈ ಕುರಿತು ಈಗಾಗಲೇ ನ್ಯಾಯಾಲಯದ ಕದ ತಟ್ಟಲಾಗಿದೆ, ಜನವರಿ ತಿಂಗಳಲ್ಲಿ ಕೋರ್ಟ್ ತೀರ್ಪು ತಮ್ಮ ಪರವಾಗಿ ಬರುವ ಆಶಯವಿದೆ. ಹಿಂದುಳಿದಿರುವ ಶ್ರೀನಿವಾಸಪುರ ತಾಲ್ಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನದ ಅಗತ್ಯವಿದೆ’ ಎಂದು ತಿಳಿಸಿದರು.
ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಸೇರಿದಂತೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ. ಪಕ್ಷಬೇಧ ಮರೆತು ಸಹಕರಿಸಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕೋರಿದರು. ಶ್ರೀನಿವಾಸಪುರ ತಾಲ್ಲೂಕಿನ ಯದುರೂರು ಸಮೀಪ 2500 ಎಕರೆ ಜಮೀನಿನಲ್ಲಿ ಹಾಗೂ ಲಕ್ಷ್ಮಿಪುರ ಸಮೀಪ ಕೈಗಾರಿಕೆ ವಲಯ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಆದರೆ ಕೆಲವರು ಅಡ್ಡಪಡಿಸುತ್ತಿದ್ದು ಕ್ಷೇತ್ರವನ್ನು ನಾನೇನು ಎತ್ತಿಕೊಂಡು ಹೋಗುತ್ತೇನೆಯೇ’ ಎಂದು ಪ್ರಶ್ನಿಸಿದರು. ಕ್ಷೇತ್ರದ ಜನರು ನನ್ನನ್ನು ಐದು ಬಾರಿ ಶಾಸಕರನ್ನಾಗಿಸಿದ್ದಾರೆ. ಅವರ ಋಣ ನನ್ನ ಮೇಲಿದೆ. ಕೈಗಾರಿಕೆಗಳು ಬಂದರೆ ತಾಲ್ಲೂಕಿನ ಅಭಿವೃದ್ಧಿಯಾಗುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗವೂ ಸಿಗುತ್ತದೆ. ಕ್ಷೇತ್ರದ ರೈತರು ಜಮೀನು ನೀಡಲು ಸಿದ್ಧರಿದ್ದಾರೆ ಎಂದರು.
ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಉದ್ಭವಿಸಿರುವ ಗೊಂದಲ ಸಂಬಂಧ ಜಿಲ್ಲಾಧಿಕಾರಿ ಹಾಗೂ ಡಿಸಿಫ್ ಜೊತೆ ಮಾತನಾಡುವೆ. ರೈತರ ಮೇಲೆ ಪೊಲೀಸರು ದೂರು ದಾಖಲು ಮಾಡಿದ್ದರೆ ಅದನ್ನು ತೆಗೆಸುವಂತೆ ಡಿಸಿಎಫ್‌ಗೆ ಸೂಚನೆ ನೀಡಿದ್ದೇನೆ. ಯಾವದೇ ಕಾರಣಕ್ಕೂ ರೈತರಿಗೆ ತೊಂದರೆ ಆಗುವುದಕ್ಕೆ ಬಿಡುವುದಿಲ್ಲ ಎಂದು ಮಲ್ಲೇಶ್ ಬಾಬು ಹೇಳಿದರು. ರೈತರಿಗೆ ಜಂಟಿ ಸರ್ವೇ ಮಾಹಿತಿ ನೋಟಿಸ್ ಕೊಟ್ಟು ನಂತರ ಗಡಿ ಭಾಗವನ್ನು ಗುರುತಿಸುವುದಕ್ಕೆ ಹೇಳುತ್ತೇವೆ ಎಂದರು. ಶ್ರೀನಿವಾಸಪುರ ತಾಲ್ಲೂಕಿನ ದೊಡಮಲದೊಡ್ಡಿ ಸುಣ್ಣಗುಂಟಪಲ್ಲಿ ಗ್ರಾಮದಲ್ಲಿ ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಘರ್ಷಣೆ ನಡೆದಿರುವ ಸಂಬಂಧ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.