ADVERTISEMENT

ಗುಡುಗು ಸಹಿತ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 15:20 IST
Last Updated 6 ಏಪ್ರಿಲ್ 2020, 15:20 IST

ಕೋಲಾರ: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಒಂದೂವರೆ ತಾಸು ಎಡಬಿಡದೆ ಸುರಿಯಿತು. ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ಹಿತಾನುಭವ ನೀಡಿತು. ಸಾರ್ವಜನಿಕರು ಛತ್ರಿ ಹಿಡಿದು ಸಾಗುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಮಳೆಯಿಂದಾಗಿ ಚರಂಡಿಗಳು ಹಾಗೂ ಮ್ಯಾನ್‌ಹೋಲ್‌ಗಳು ಕ್ಷಣ ಮಾತ್ರದಲ್ಲಿ ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು. ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಹಾಗೂ ಪೆಟ್ರೋಲ್‌ ಬಂಕ್‌ಗಳ ಬಳಿ ನಿಂತಿದ್ದ ದೃಶ್ಯ ಕಂಡುಬಂತು.

ADVERTISEMENT

ಮಳೆಯಿಂದಾಗಿ ಜಿಲ್ಲಾ ಕೇಂದ್ರದ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾದವು. ರೈಲ್ವೆ ಕೆಳ ಸೇತುವೆ ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದೆ. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ತುಂತುರು ಮಳೆಯಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.