ADVERTISEMENT

ಹುಣ್ಣಿಮೆ ಹಾಡಿಗೆ ನಾಟಕದ ಹೋಳಿಗೆ

ಆದಿಮದಲ್ಲಿ ಕಣ್ಮನ ಸೆಳೆದ ರಮಾಬಾಯಿ ಅಂಬೇಡ್ಕರ್‌ ನಾಟಕ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 17:31 IST
Last Updated 11 ಜುಲೈ 2025, 17:31 IST
ರಮಾಬಾಯಿ ಅಂಬೇಡ್ಕರ್‌ ನಾಟಕದ ದೃಶ್ಯ
ರಮಾಬಾಯಿ ಅಂಬೇಡ್ಕರ್‌ ನಾಟಕದ ದೃಶ್ಯ   

ಕೋಲಾರ: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 219ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ರಮಾಬಾಯಿ ಅಂಬೇಡ್ಕರ್‌ ನಾಟಕ ನೋಡುಗರ ಕಣ್ಮನ ಸೆಳೆಯಿತು.

ನಟ, ನಿರ್ದೇಶಕ ಕೆಜಿಎಫ್‌ನ ಭೀಮಗಾನಹಳ್ಳಿ ಅಮರನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

‘ಆದಿಮ ಕೇಂದ್ರ ಹತ್ತಾರು ವರ್ಷಗಳಿಂದ ರಂಗಭೂಮಿಯನ್ನು ಪೋಷಿಸಿ ಬೆಳೆಸುತ್ತಾ ಬಂದಿದೆ. ಅನೇಕ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಆ ಕಾರಣ ಅನೇಕ ಕಲಾವಿದರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ADVERTISEMENT

‘ನಾಟಕಗಳಲ್ಲಿ ಗುರುತಿಸಿಕೊಂಡ ಕಲಾವಿದರು ಸಿನಿಮಾಗಳತ್ತ ಮುಖ ಮಾಡಬೇಕು. ಆದಿಮದಲ್ಲಿ ಡ್ರಾಮಾ ಡಿಪ್ಲೊಮಾ ಕೋರ್ಸ್‌ ಆರಂಭವಾಗಿರುವುದು ಬಹಳ ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಇಲ್ಲಿ ತರಬೇತಿ ಹೊಂದಿದ ಕಲಾವಿದರಿಗೆ ಸಿನಿಮಾಗಳಲ್ಲಿ ಅವಕಾಶ ನೀಡುವ ಉದ್ದೇಶ ನನ್ನದಾಗಿದೆ. ಸ್ಥಳೀಯ ಪ್ರತಿಭೆಗಳು ಇದರ ಲಾಭ ಪಡೆದುಕೊಂಡು ಅವರಿಗೆ ಇಷ್ಟವಾದ ಕಲಾ ವಿಭಾಗದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ತೇರಹಳ್ಳಿ ಬೆಟ್ಟದ ಮೇಲಿನ ಹಳ್ಳಿಗಳು, ಅಲ್ಲಿನ ಪರಿಸರ ಜನಜೀವನ ಕುರಿತು ಕಥೆ ಸಿದ್ಧಪಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಅದನ್ನು ಸಿನಿಮಾ ರೂಪಕ್ಕೆ ತಂದು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ, ‘ಆದಿಮದಲ್ಲಿ ಇದುವರೆಗೆ ಪ್ರತಿ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಅನೇಕ ನಾಟಕಗಳು ನಡೆದಿರಬಹುದು. ಆದರೆ ಇವತ್ತು ನಡೆದ ನಾಟಕ ಬಹಳ ವಿಶೇಷವಾದುದ್ದಾಗಿದೆ. ರಮಾಬಾಯಿ ಅವರ ತ್ಯಾಗ, ಸಹನೆಯಿಂದ ಬಾಬಾ ಸಾಹೇಬರು ಜಗತ್ತು ಕಂಡ ನಾಯಕರಾದರು. ಜ್ಞಾನದ ಪರಾಕಾಷ್ಠೆಗೆ ತಲುಪಲು ಸಾಧ್ಯವಾಯಿತು’ ಎಂದರು.

ಎಚ್.ಟಿ.ಪೋತೆ ಅವರ ರಮಾಯಿ ಕಾದಂಬರಿಯ ಆಧಾರಿತ ರಂಗರೂಪವೇ ರಮಾಬಾಯಿ ಅಂಬೇಡ್ಕರ ನಾಟಕ. ಅಂಬೇಡ್ಕರ್ ಅವರ ಹುಟ್ಟು, ಬೆಳವಣಿಗೆ, ವಿದ್ಯಾಬ್ಯಾಸ, ಹೋರಾಟಗಳು ಕ್ರಮಬದ್ಧವಾಗಿ ನಾಟಕ ದೃಶ್ಯಗಳಲ್ಲಿ ಕಾಣುತ್ತವೆ. ನಾಲ್ಕು ಪಾತ್ರಗಳಷ್ಟೆ ರಂಗದ ಮೇಲೆ ಇದ್ದರೂ ಎಲ್ಲಿಯೂ ಪ್ರೇಕ್ಷಕ ಅರ್ಥವಾಗದ ಪೇಚಿಗೆ ಸಿಲುಕದಂತೆ ರಂಗರೂಪಗೊಳಿಸಲಾಗಿದೆ.

ರಂಗರೂಪ ನೆರವು ಗಣಕರಂಗ ಧಾರವಾಡ, ವಿನ್ಯಾಸ ಮತ್ತು ನಿರ್ದೇಶನ ಶ್ರೀಕಾಂತ ನವಲಗರಿ, ಸಂಗೀತ ಸಂಯೋಜನೆ ಮಹೇಶ ಹುಂಡೇಕಾರ, ಸಂಗೀತ ನಿರ್ವಹಣೆ ಮತ್ತು ಬೆಳಕಿನ ವಿನ್ಯಾಸ ರಾಹುಲ್ ಪಿ, ರಂಗದ ಮೇಲೆ ಅಕ್ಕಮ್ಮ, ಅಂಬಿಕಾ, ರಾಜು, ಶಿವು, ತಂಡ ಸಂಗಮ ಕಲಾ ತಂಡ (ಬಾಗಲಕೋಟೆ) ಅಭಿನಯಿಸಿದೆ.

ಕಾರ್ಯಕ್ರಮದಲ್ಲಿ ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ರಾಜಪ್ಪ ದಳವಾಯಿ, ಕುಪ್ನಳ್ಳಿ ಎಂ. ಭೈರಪ್ಪ, ಪಾರಿಜಾತ ಶ್ರೀನಿವಾಸ್. ಪೂರ್ಣಿಮಾ, ನಾರಾಯಣಸ್ವಾಮಿ, ಮಣಿ, ಅಮರೇಶ್, ಮಾರ್ಕೊಂಡಪ್ಪ ಇದ್ದರು. ಕಾರ್ಯಕ್ರಮವನ್ನು ಕೆ.ವಿ.ಕಾಳಿದಾಸ ನಿರೂಪಿಸಿದರು. ನಾವೆಂಕಿ ಕೋಲಾರ ಸ್ವಾಗತಿಸಿದರು. ನೇತ್ರಾವತಿ ರಂಗ ತಂಡವನ್ನು ಅಭಿನಂದಿಸಿದರು. ಆದಿಮ ಗೆಳೆಯರ ಬಳಗ ಆದಿಮದ ಆಶಯ ಗೀತೆ ಹಾಡಿದರು.

ಆದಿಮದಲ್ಲಿ ನಡೆದ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ನಿರ್ದೇಶಕ ಕೆಜಿಎಫ್‌ನ ಭೀಮಗಾನಹಳ್ಳಿ ಅಮರನಾಥ್ ಮಾತನಾಡಿದರು. ಆದಿಮ ಅಧ್ಯಕ್ಷ ಎನ್‌.ಮುನಿಸ್ವಾಮಿ ಪಾಲ್ಗೊಂಡಿದ್ದರು

Highlights - ರಂಗಭೂಮಿ ಕಲಾವಿದರು ಸಿನಿಮಾಗಳತ್ತ ಮುಖ ಮಾಡಬೇಕು ಆದಿಮದಲ್ಲಿ ಡ್ರಾಮಾ ಡಿಪ್ಲೊಮಾ ಕೋರ್ಸ್‌ ತೇರಹಳ್ಳಿ ಬೆಟ್ಟದ ಮೇಲಿನ ಜನಜೀವನ ಕುರಿತು ಸದ್ಯದಲ್ಲೇ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.