ADVERTISEMENT

ನಂಬಿಕೆ ದ್ರೋಹವಾಗಿದೆ: ಚುನಾವಣೆಗೆ ಸ್ಪರ್ಧಿಸದಿರುವ ಸುಳಿವು ನೀಡಿದ ರಮೇಶ್ ಕುಮಾರ್

ಜೀವನದಲ್ಲಿ ಸೋತಿದ್ದೇನೆ; ನಂಬಿಕೆ ದ್ರೋಹವಾಗಿದೆ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 12:52 IST
Last Updated 15 ಡಿಸೆಂಬರ್ 2024, 12:52 IST
   

ಕೋಲಾರ: ‘ಒಂದೂವರೆ ವರ್ಷದಿಂದ ನಾನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮತ್ತೆ ಚುನಾವಣೆಗೆ ನಿಲ್ಲುವ ಆಸೆ ಇದ್ದಿದ್ದರೆ ಬಿಳಿ ಷರ್ಟ್‌ ಹಾಕಿಕೊಂಡು ಮದುವೆ, ಮುಂಜಿ, ರಥೋತ್ಸವ ಅಂಥ ಓಡಾಡಬಹುದಿತ್ತು’ ಎಂದು ಮಾಜಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ನಡೆದ ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಜನಘಟ್ಟ ವೆಂಕಟಮುನಿಯಪ್ಪ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರುವ ಸುಳಿವು ನೀಡಿದರು.

‘ಜೀವನದಲ್ಲಿ ಸೋತಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಕ್ಕೆ ಬೇಸರ ಅಲ್ಲ. ನಂಬಿಕೆ ದ್ರೋಹದಿಂದ ಸೋಲುಂಟಾಯಿತು. ಈ ಹಿಂದೆ ನಾಲ್ಕು ಬಾರಿ ಸೋತಿದ್ದೆ, ಇದು ಐದನೇ ಸೋಲು ಅಷ್ಟೆ. ಆದರೆ, ನನ್ನ ಜೊತೆಯಲ್ಲೇ ಇದ್ದು, ಭುಜದ ಮೇಲೆ ಕೈಹಾಕಿ ಬೆನ್ನಿಗೆ ಚೂರಿ ಹಾಕಿದರು, ಊಟಕ್ಕೆ ಕರೆದು ವಿಷ ಹಾಕಿದರು, ಜೊತೆಯಲ್ಲೇ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದರು, ದೇವರಿಗೆ ನಮಸ್ಕಾರ ಹಾಕಿ ಮಲಗಿದ್ದಾಗ ಕುತ್ತಿಗೆಗೆ ಕತ್ತಿ ಇಟ್ಟರು’ ಎಂದು ಬೇಸರಪಟ್ಟರು.

ADVERTISEMENT

‘ಈ ಕಾರ್ಯಕ್ರಮಕ್ಕೆ ಬರಲೂ ಯೋಚನೆ ಮಾಡಿದೆ. ಕಡೆ ಪಕ್ಷ ನನ್ನ ಮುಖ ನೋಡಲಿ, ಮುಂದೆ ಇರುತ್ತೇನೋ ಇಲ್ಲವೋ ಎನ್ನುವ ಕಾರಣಕ್ಕೆ ಬಂದೆ’ ಎಂದರು.

‘ಈಗ ಚುನಾವಣೆ ಎಂದರೆ‌ ಚಳಿ, ಜ್ವರ, ವಾಂತಿ, ಭೇದಿ ಬರುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಶ್ರೀಮಂತರು, ಬಂಡವಾಳಶಾಹಿಗಳು, ಬಾರ್‌, ಕ್ವಾರಿ, ರಿಯಲ್ ಎಸ್ಟೇಟ್‌, ಶಿಕ್ಷಣ ಸಂಸ್ಥೆಯವರು ಬಂದು ಬಂಡವಾಳ ಹೂಡಿ ಸ್ಪರ್ಧಿಸುವ ಕಾಲ ಬಂದಿದೆ. ಹಾಗೆಯೇ ಯಾರೂ ಲಾಭವಿಲ್ಲದೆ ಚುನಾವಣೆಗೆ ‌ನಿಲ್ಲಲ್ಲ. ಹಿಂದಿನಂತೆ ಸೈಕಲ್‌ನಲ್ಲಿ ಬಂದು ಹೋದರೆ ಗೆಲ್ಲಿಸುವ ಕಾಲ ಹೋಗಿದೆ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಥಳೀಯರು ಸೇರಿದಂತೆ ಜನಸಾಮಾನ್ಯರು ಸ್ಪರ್ಧಿಸಲು ಸಾಧ್ಯವಿಲ್ಲವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಅಧಿಕಾರ ವಿಕೇಂದ್ರೀಕರಣಗೊಳಿಸಲು ಪಂಚಾಯತ್ ರಾಜ್‌ ವ್ಯವಸ್ಥೆ ಜಾರಿಗೆ ತರಲಾಯಿತು. ಅದರಲ್ಲಿ ಕೆಲವು ದೋಷಗಳಿರುವುದಕ್ಕೆ ತಿದ್ದುಪಡಿ ಮಾಡಲಾಯಿತು. ಈ ವಿಚಾರ ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದರೂ ಇಂದಿಗೂ ಪರಿಣಾಮಕಾರಿಯಾಗಿ ಚುನಾವಣಾ ವ್ಯವಸ್ಥೆಗಳಲ್ಲಿ ಜಾರಿಗೆ ತರಲಾಗಲಿಲ್ಲ. ಕಡತಗಳನ್ನು ಕಟ್ಟಿ ಮೂಲೆಗೆ ಎಸೆಯಲಾಗಿದೆ, ಅಂಬೇಡ್ಕರ್ ಸಿದ್ಧಾಂತಗಳನ್ನು ಪಲ್ಟಿ ಹೊಡೆಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.