ಕೋಲಾರ: ಸೀರತ್ ಅಭಿಯಾನ ಸಮಿತಿ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಕೋಲಾರ ಸಮಿತಿಯಿಂದ ನಗರದ ಸ್ಕೌಟ್ಸ್ ಭವನದಲ್ಲಿ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಸೀರತ್ (ಜೀವನ ಚರಿತ್ರೆ) ಅಭಿಯಾನ ಪ್ರಯುಕ್ತ ಸಾರ್ವಜನಿಕ ಸಮಾವೇಶ ನಡೆಯಿತು.
‘ಪ್ರವಾದಿ ಮುಹಮ್ಮದ್ ಪೈಗಂಬರ್ ಜೀವನ ಚರಿತ್ರೆಯನ್ನು ಅಳವಡಿಸಿಕೊಳ್ಳಬೇಕು. ಪವಿತ್ರ ಕುರಾನ್ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಪ್ರವಾದಿ ಮುಹಮ್ಮದ್ ಎಲ್ಲರಿಗೂ ಶಾಂತಿ, ಸತ್ಯ, ನ್ಯಾಯದ ಪರಿಕಲ್ಪನೆ ತಿಳಿಸಿದ್ದಾರೆ’ ಎಂದು ಜಮಾತೆ ಇಸ್ಲಾಮಿ ಹಿಂದ್ ಬೆಂಗಳೂರು ಸಲಹಾ ಸಮಿತಿ ಸದಸ್ಯ ಮಸೂದ್ ಶರೀಫ್ ಹೇಳಿದರು.
‘ನ್ಯಾಯದ ಪಾಲನೆಯಾದರೆ ಸಮಾಜದಲ್ಲಿ ಶಾಂತಿ ನಿರ್ಮಾಣವಾಗುತ್ತದೆ. ಅಪರಾಧ ಹಾಗೂ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ. ನ್ಯಾಯದ ಅಗತ್ಯ ಸಾಮಾಜಕ್ಕೆ ಬಹಳ ಬೇಕಿದೆ. ಮನೆಯಿಂದಲೇ ಮಕ್ಕಳಿಗೆ ನ್ಯಾಯದ ಅರಿವನ್ನು ಷೋಷಕರು ಮೂಡಿಸಬೇಕು’ ಎಂದು ಸಲಹೆ ನೀಡಿದರು.
‘ಮಹಿಳೆಯರಿಗೆ ಬಹಳ ವರ್ಷಗಳ ಹಿಂದೆ ಸರಿಯಾದ ಸ್ಥಾನಮಾನ ಇರಲಿಲ್ಲ. ಆದರೆ, ಪ್ರವಾದಿ ಮುಹಮ್ಮದ್ ಪೈಗಂಬರ್ ಹೆಣ್ಣು ಮಕ್ಕಳ ಮೇಲೆ ಆಗುತ್ತಿದ್ದ ದೌರ್ಜನ್ಯ ತಡೆಗಟ್ಟಿ ಸಮಾನ ಅವಕಾಶ ಕಲ್ಪಿಸಿದರು’ ಎಂದರು.
‘ತಂದೆ ತಾಯಿ ಜೊತೆ ನಮ್ರತೆ, ಪ್ರೀತಿಯಿಂದ ವರ್ತಿಸಬೇಕು. ಅವರ ಕೆಲಸಗಳಲ್ಲಿ ಸಹಾಯ ಮಾಡಬೇಕು. ತಂದೆ ತಾಯಿಯಿಂದಲೇ ಸ್ವರ್ಗ ಸಿಗುತ್ತದೆ ಎಂದು ಪ್ರವಾದಿಯವರು ಹೇಳಿದ್ದಾರೆ’ ಎಂದು ನುಡಿದರು.
‘ಎರಡು ಗುಂಪುಗಳ ನಡುವೆ ಸಂಘರ್ಷ ಇದ್ದರೆ ನ್ಯಾಯದ ಆಧಾರದ ಮೇಲೆ ಶಾಂತಿಯ ಸಂಧಾನ ಮಾಡಬೇಕು. ಯಾರ ಹಕ್ಕನ್ನು ಕಸಿದುಕೊಳ್ಳಬಾರದು, ಮೋಸ ಮಾಡಬಾರದು’ ಎಂದು ತಿಳಿಸಿದರು.
ದತ್ತಪಾದಾನಂದ ಸ್ವಾಮೀಜಿ ಮಾತನಾಡಿ, ‘ಮನುಷ್ಯರೆಲ್ಲರೂ ಒಂದೇ. ಎಲ್ಲರ ರಕ್ತವೂ ಒಂದೇ ತರ ಇರುತ್ತದೆ. ಎಲ್ಲಾ ಧರ್ಮದ ಗ್ರಂಥಗಳು ಜೀವನ ಯಾವ ರೀತಿ ಮಾಡಬೇಕು ಎಂದು ತಿಳಿಸುತ್ತವೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಶೈಲಿಯನ್ನು ನಾವು ಅಳವಡಿಸಿಕೊಳ್ಳಬೇಕು’ ಎಂದರು.
ಸಾಮಾಜಿಕ ಕಾರ್ಯಕರ್ತ ಅನ್ವರ್ ಪಾಷ ಮಾತನಾಡಿ, ‘ಸುಮಾರು ವರ್ಷಗಳ ಹಿಂದೆ ಪ್ರವಾದಿಗಳು, ದಾರ್ಶನಿಕರು, ಮಹಾಪುರುಷರು ಸಮಾಜ ಸುಧಾರಣೆ ಕೆಲಸ ಮಾಡಿದರು. ಬೇರೆ ಸಮಾಜದ ಜೊತೆ ಜಗಳ ಮಾಡುವ ಕೆಲಸ ಯಾರೂ ಮಾಡಲಿಲ್ಲ. ಎಲ್ಲರ ಉದ್ದೇಶ ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡುವುದೇ ಆಗಿತ್ತು. ಆದರೆ ಇವತ್ತು ದೇಶದಲ್ಲಿ ಯಾರು ದ್ವೇಷ ಭಾಷಣ ಮಾಡುತ್ತಾರೋ ಅವರನ್ನು ಹೀರೋ ರೀತಿ ಬಿಂಬಿಸಲಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮುಖಂಡರಾದ ಮುನಿಯಪ್ಪ, ಶಾಂತಕುಮಾರ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ರುಹುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಜ್ ಪಾಷ, ಮುಖಂಡರಾದ ಸಲಾವುದ್ದೀನ್ ಬಾಬು, ಅಂಬರೀಷ್, ಅನ್ಸರ್, ಅಜ್ಮಲ್, ನಫೀಜ್, ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ಮಕ್ಕಳಿಗೆ ಮನೆಯಿಂದಲೇ ನ್ಯಾಯದ ಅರಿವು ಮೂಡಿಸಬೇಕು ಎಲ್ಲಾ ಧರ್ಮಗ್ರಂಥಗಳಲ್ಲೂ ಜೀವನ ಪಾಠ ದ್ವೇಷ ಭಾಷಣ ಮಾಡುವವರನ್ನು ಹೀರೋ ರೀತಿ ಬಿಂಬಿಸಲಾಗುತ್ತಿದೆ: ವಿಷಾದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.