ADVERTISEMENT

ಪಿಂಚಣಿ ಬಿಡುಗಡೆಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 14:59 IST
Last Updated 20 ಮೇ 2020, 14:59 IST
ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಾಗೂ ಮಾಸಾಶನ ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಬುಧವಾರ ಗ್ರೇಡ್‌–2 ತಹಶೀಲ್ದಾರ್ ಸುಜಾತಾ ಅವರಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಾಗೂ ಮಾಸಾಶನ ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಬುಧವಾರ ಗ್ರೇಡ್‌–2 ತಹಶೀಲ್ದಾರ್ ಸುಜಾತಾ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಾಗೂ ಮಾಸಾಶನ ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಬುಧವಾರ ಗ್ರೇಡ್‌–2 ತಹಶೀಲ್ದಾರ್ ಸುಜಾತಾ ಅವರಿಗೆ ಮನವಿ ಸಲ್ಲಿಸಿದರು.

‘ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸರ್ಕಾರ ವಿವಿಧ ಪ್ಯಾಕೇಜ್ ಘೋಷಿಸಿ ಜನರಿಗೆ ನೆರವಾಗುತ್ತಿದೆ. ಆದರೆ, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಫಲಾನುಭವಿಗಳ ಜೀವನ ನಿರ್ವಹಣೆಗೆ ಕಷ್ಟವಾಗಿದೆ’ ಎಂದು ಸಂಘಟನೆ ಸದಸ್ಯರು ದೂರಿದರು.

‘ಪಿಂಚಣಿ ಹಣದಲ್ಲಿ ಸಾಕಷ್ಟು ಮಂದಿ ಜೀವನ ಸಾಗಿಸುತ್ತಿದ್ದಾರೆ ಪಿಂಚಣಿ ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿಗಳು ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಫಲಾನುಭವಿಗಳು ಪಿಂಚಣಿಗಾಗಿ ಅಲೆದಾಡುವಂತಾಗಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ADVERTISEMENT

‘ಮಾಸಾಶನ ಹಾಗೂ ಪಿಂಚಣಿಯನ್ನೇ ನಂಬಿಕೊಂಡಿರುವ ಫಲಾನುಭವಿಗಳಿಗೆ ಔಷಧ, ಮಾತ್ರೆ ಖರೀದಿಗೂ ಹಣ ಇಲ್ಲವಾಗಿದೆ. ಬಡವರ ಹೆಸರಿನಲ್ಲಿ ಸರ್ಕಾರ ವಿವಿಧ ಯೋಜನೆಗಳಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡುತ್ತಿದೆ. ಆದರೆ, ಈ ಹಣ ಫಲಾನುಭವಿಗಳ ಕೈಸೇರದೆ ದುರ್ಬಳಕೆಯಾಗುತ್ತಿದೆ’ ಎಂದು ಆರೋಪಿಸಿದರು.

ಸಮಸ್ಯೆಗೆ ಸ್ಪಂದಿಸಬೇಕು: ‘ಸರ್ಕಾರ ಪಿಂಚಣಿ ಮತ್ತು ಮಾಸಾಶನ ಹಣವನ್ನು ಶೀಘ್ರವೇ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ಬಡವರ ಆರ್ಥಿಕ ಸಮಸ್ಯೆಗೆ ಸ್ಪಂದಿಸಬೇಕು. ಉಪ ವಿಭಾಗಾಧಿಕಾರಿಯು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಪಿಂಚಣಿ ಮತ್ತು ಮಾಸಾಶನ ನೀಡಿಕೆಯಲ್ಲಿನ ವಿಳಂಬ ತಪ್ಪಿಸಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ತಿಮ್ಮಣ್ಣ, ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.