ADVERTISEMENT

ಸವಲತ್ತು ತಲುಪಿಸಲು ಕಂದಾಯ ಅದಾಲತ್‌

ಕುಂದು ಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:32 IST
Last Updated 31 ಜುಲೈ 2019, 14:32 IST
ಕೋಲಾರದಲ್ಲಿ ಬುಧವಾರ ನಡೆದ ಕಂದಾಯ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸಾರ್ವಜನಿಕರ ಅಹವಾಲು ಆಲಿಸಿದರು.
ಕೋಲಾರದಲ್ಲಿ ಬುಧವಾರ ನಡೆದ ಕಂದಾಯ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸಾರ್ವಜನಿಕರ ಅಹವಾಲು ಆಲಿಸಿದರು.   

ಕೋಲಾರ: ‘ಸರ್ಕಾರದ ಸವಲತ್ತುಗಳನ್ನು ಸಕಾಲದಲ್ಲಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶಕ್ಕಾಗಿ ಜಿಲ್ಲಾಡಳಿತವು ಕಂದಾಯ ಆದಾಲತ್ ಆಯೋಜಿಸಿದೆ’ ಎಂದು ಜಿಲ್ಲಾಧಿಕಾರಿ ಜಿ.ಮಂಜುನಾಥ್ ಹೇಳಿದರು.

ಕಂದಾಯ ಇಲಾಖೆಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ ಹಾಗೂ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಸಾರ್ವಜನಿಕರು ಅರ್ಜಿ ಹಿಡಿದು ಸರ್ಕಾರಿ ಕಚೇರಿಗೆ ಅಲೆದಾಡಿ ಸಕಾಲದಲ್ಲಿ ಕೆಲಸ ಆಗದಿದ್ದ ಸಂದರ್ಭದಲ್ಲಿ ಅದಾಲತ್‌ ಮೂಲಕ ಸಮಸ್ಯೆ ಪರಿಹರಿಸಲಾಗುತ್ತದೆ’ ಎಂದರು.

‘ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಅರ್ಜಿ ಸ್ವೀಕರಿಸುತ್ತಾರೆ. ಆ ಅರ್ಜಿಗಳಿಗೆ ಸ್ವೀಕೃತಿ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಾರೆ. ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ, ಪಿಂಚಣಿ, ಖಾತೆ ತಿದ್ದುಪಡಿ, ಪವತಿವಾರು ಖಾತೆ, ಪಹಣಿ, ಸಾಗುವಳಿ ಚೀಟಿ, ಹಕ್ಕುಪತ್ರ ವಿತರಣೆ, ಪಿ ನಂಬರ್‌ ಸಮಸ್ಯೆ ಸೇರಿದಂತೆ ಸಾಮಾಜಿಕ ಭದ್ರತೆ ದಾಖಲಾತಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

‘ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ತ್ವರಿತವಾಗಿ ಬಗೆಹರಿಸಬಹುದು. ಮತ್ತೆ ಕೆಲ ಸಮಸ್ಯೆ ಬಗೆಹರಿಸಲು ದಾಖಲೆಪತ್ರ ಮತ್ತು ಸ್ಥಳ ಪರಿಶೀಲನೆ ವರದಿ ಬೇಕಿರುವುದರಿಂದ ಹೆಚ್ಚಿನ ಸಮಯಾವಕಾಶ ಅಗತ್ಯವಿರುತ್ತದೆ. ಆದ ಕಾರಣ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಗ್ರಾಮೀಣ ಭಾಗದಲ್ಲೂ ಪ್ಲಾಸ್ಟಿಕ್ ಮುಕ್ತ ಹಳ್ಳಿಗಳ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಬೇಕು. ಗ್ರಾಮೀಣ ಭಾಗದಲ್ಲಿ ಕಸ ವಿಲೇವಾರಿ ಸಮಸ್ಯೆಯಿದೆ. ಹೆಚ್ಚಾಗಿ ಗಿಡ ಮರ ಬೆಳೆಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಕೆರೆ, ಕಾಲುವೆ ಕುಂಟೆಗಳನ್ನು ಪುನಶ್ಚೇತನ ಮಾಡಬೇಕು. ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

ಸತತ ಬರ: ‘ಜಿಲ್ಲೆಯು ಸತತ ಬರಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಹಣ ಖರ್ಚು ಮಾಡಿ ಕೆ.ಸಿ ವ್ಯಾಲಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಿಂದ ಜಿಲ್ಲೆಯ 136 ಕೆರೆಗಳನ್ನು ತುಂಬಿಸಲಾಗುತ್ತದೆ. ಹೆಚ್ಚುವರಿಯಾಗಿ 226 ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಸಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

‘ಕೆ.ಸಿ ವ್ಯಾಲಿ ಯೋಜನೆಗೆ ಸುಮಾರು ₹ 1,350 ಕೋಟಿ ವೆಚ್ಚವಾಗಿದೆ. ಸರ್ಕಾರ ಹೆಚ್ಚುವರಿಯಾಗಿ ₹ 450 ಕೋಟಿ ಮಂಜೂರು ಮಾಡಿದೆ. ಈಗಾಗಲೇ 20 ಕೆರೆಗಳು ತುಂಬಿವೆ. ಅಂತರ್ಜಲ ಮಟ್ಟ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶ’ ಎಂದು ಮಾಹಿತಿ ನೀಡಿದರು.

ಆತುರ ಮಾಡಬೇಡಿ: ‘ಕೆ.ಸಿ ವ್ಯಾಲಿ ಯೋಜನೆ ನೀರನ್ನು ರೈತರು ಕೃಷಿ ಚಟುವಟಿಕೆಗೆ ಬಳಸಬಾರದು. ಮುಂದಿನ 6 ತಿಂಗಳಲ್ಲಿ ಜಿಲ್ಲೆಯ ಕೆರೆಗಳು ಭರ್ತಿಯಾಗಿ ಅಂತರ್ಜಲ ಮಟ್ಟ ಸುಧಾರಿಸಲಿದೆ. ಬಳಿಕ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳಲ್ಲಿ ಜಲ ಮರುಪೂರಣವಾಗುತ್ತದೆ. ಆವರೆಗೆ ತಾಳ್ಮೆಯಿಂದ ಕಾಯಿರಿ. ಕೆರೆಗಳಲ್ಲಿನ ನೀರನ್ನು ಅಕ್ರಮವಾಗಿ ಕೃಷಿಗೆ ಬಳಸುವ ಆತುರ ನಿರ್ಧಾರ ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.

‘ನೀರಿಗಾಗಿ ಹಲವು ವರ್ಷಗಳಿಂದ ಕಾದಿರುವ ನಿಮಗೆ ನಾಲ್ಕೈದು ತಿಂಗಳು ಕಾಯಲು ಸಾಧ್ಯವಿಲ್ಲವೇ? ನಿಮ್ಮ ಕೊಳವೆ ಬಾವಿಗಳಲ್ಲೇ ನೀರು ಪಡೆದು ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದು ಹಾಗೂ ರೇಷ್ಮೆ ಕೃಷಿ ಮಾಡಬಹುದು’ ಎಂದು ಸಲಹೆ ನೀಡಿದರು.

ಪ್ರಸ್ತಾವ ಸಲ್ಲಿಸಿದ್ದೇವೆ: ‘ಸರ್ಕಾರ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ 28 ಸಾವಿರ ರೈತರಿಗೆ ₹ 26 ಕೋಟಿ ಬಿಡುಗಡೆ ಮಾಡಿದೆ. ಮುಂಗಾರು ಸಾಲ ಮನ್ನಾ ಯೋಜನೆಯಲ್ಲಿ ₹ 150 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಸರ್ಕಾರವು ರೈತರ ಸಮಸ್ಯೆ ಪರಿಹರಿಸಲು ಮುಂದಾಗಿದೆ. ಇದಕ್ಕೆ ಜಿಲ್ಲಾಡಳಿತ ಎಲ್ಲಾ ಸಹಕಾರ ನೀಡುತ್ತಿದೆ’ ಎಂದರು.

‘ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ಸುಮಾರು ₹ 15 ಕೋಟಿಯಷ್ಟು ಬೆಳೆ ನಷ್ಟವಾಗಿದೆ. ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ₹ 3 ಕೋಟಿ ಬಿಡುಗಡೆ ಮಾಡಿದೆ. ಉಳಿದ ₹ 12 ಕೋಟಿ ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದು ವಿವರಿಸಿದರು.

‘ಈಗಾಗಲೇ ಬಿತ್ತನೆ ಮಾಡಿರುವವರು ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸುವುದು ಸೂಕ್ತ. ಕೃಷಿ ಅಥವಾ ತೋಟಗಾರಿಕೆ ಬೆಳೆಗಳು ನಷ್ಟವಾದರೆ ವಿಮೆ ಮೂಲಕ ಪರಿಹಾರ ಪಡೆಯಬಹುದು’ ಎಂದು ಸಲಹೆ ನೀಡಿದರು.

ಕೋಲಾರ ತಾಲ್ಲೂಕಿನ ಕಸಬಾ, ವೇಮಗಲ್, ವಕ್ಕಲೇರಿ, ನರಸಾಪುರ, ಸುಗಟೂರು, ಹೋಳೂರು, ಹುತ್ತೂರು ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಜಿಲ್ಲಾಧಿಕಾರಿಯು ಫಲಾನುಭವಿಗಳಿಗೆ ಹಕ್ಕುಪತ್ರ, ಪಿಂಚಣಿ ಹಾಗೂ ವೇತನ ಮಂಜೂರಾತಿ ಪತ್ರ ವಿತರಿಸಿದರು.

ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್‌ (ಪ್ರಭಾರ) ನಾಗವೇಣಿ, ಉಪ ತಹಶೀಲ್ದಾರ್‌ ಸುಜಾತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.