ADVERTISEMENT

ವರ್ತುಲ ರಸ್ತೆ: ಸಿ.ಎಂ ಬಳಿಗೆ ನಿಯೋಗ

ನಗರಸಭೆ ಅಧ್ಯಕ್ಷ– ಉಪಾಧ್ಯಕ್ಷರ ಪದಗ್ರಹಣದ ವೇಳೆ ಸಚಿವರ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 16:00 IST
Last Updated 3 ಡಿಸೆಂಬರ್ 2020, 16:00 IST
ಕೋಲಾರ ನಗರಸಭೆ ನೂತನ ಅಧ್ಯಕ್ಷೆ ಶ್ವೇತಾ ಮತ್ತು ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹಾಗೂ ಶಾಸಕ ಕೆ.ಶ್ರೀನಿವಾಸಗೌಡ ಗುರುವಾರ ಶುಭ ಕೋರಿದರು.
ಕೋಲಾರ ನಗರಸಭೆ ನೂತನ ಅಧ್ಯಕ್ಷೆ ಶ್ವೇತಾ ಮತ್ತು ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹಾಗೂ ಶಾಸಕ ಕೆ.ಶ್ರೀನಿವಾಸಗೌಡ ಗುರುವಾರ ಶುಭ ಕೋರಿದರು.   

ಕೋಲಾರ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣಾ ಫಲಿತಾಂಶ ಘೋಷಣೆಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಶ್ವೇತಾ ಮತ್ತು ಎನ್‌.ಎಸ್‌.ಪ್ರವೀಣ್‌ಗೌಡ ಅವರು ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಇಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದರು.

ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಶುಭ ಕೋರಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ‘ಕೋಲಾರ ರಾಜ್ಯದ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿದ್ದು, ಜಿಲ್ಲಾ ಕೇಂದ್ರದ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ನಗರಸಭೆ ಸದಸ್ಯರ ಜತೆ ಮುಖ್ಯಮಂತ್ರಿಗೆ ಬಳಿಗೆ ನಿಯೋಗ ಹೋಗುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯ 3 ತಾಲ್ಲೂಕಿಗೆ ಕುಡಿಯುವ ನೀರು ಒದಗಿಸಲಿರುವ ಯರಗೋಳ್ ಯೋಜನೆ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. 2021ರ ಜನವರಿ ವೇಳೆಗ ಮುಖ್ಯಮಂತ್ರಿಗಳು ಯೋಜನೆ ಲೋಕಾರ್ಪಣೆ ಮಾಡುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಯೋಜನೆಗೆ ಸಂಬಂಧಿಸಿದಂತೆ 3 ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಬೇಕಿದೆ’ ಎಂದು ಹೇಳಿದರು.

ADVERTISEMENT

‘ಜಿಲ್ಲಾ ಕೇಂದ್ರದ ರಸ್ತೆಗಳ ಅಗಲೀಕರಣ, ಎಪಿಎಂಸಿಗೆ ಜಮೀನು ನೀಡಿಕೆ ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ನಗರಸಭೆ ಸದಸ್ಯರ ಸಹಕಾರ ಅಗತ್ಯ. ಜನಪ್ರತಿನಿಧಿಗಳು ಪಕ್ಷ ಬೇಧ ಮರೆತು ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಕೈಜೋಡಿಸಬೇಕು. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನಗರವಾಸಿಗಳ ನಿರೀಕ್ಷೆಗೂ ಮೀರಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದ 6 ನಗರಸಭೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಗೆ ಚುನಾವಣೆ ನಡೆದರೂ ಫಲಿತಾಂಶ ಘೋಷಿಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ನ್ಯಾಯಾಲಯ ಮಂಗಳವಾರ (ನ.1) ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ಗೊಂದಲಕ್ಕೆ ತೆರೆಬಿದ್ದಿದೆ’ ಎಂದರು.

ಧೂಳು ಮುಕ್ತ ನಗರ: ‘ನಗರಸಭೆಯ ನೂತನ ಆಡಳಿತ ಮಂಡಳಿಯಿಂದ ಅಭಿವೃದ್ಧಿ ಕೆಲಸಕ್ಕೆ ಹೆಚ್ಚು ಬಲ ಬಂದಿದೆ. ನಗರದಲ್ಲಿ ನಡೆಯುತ್ತಿರುವ ರಸ್ತೆಗಳ ಅಗಲೀಕರಣ ಮತ್ತು ಒಳಚರಂಡಿ ಕಾಮಗಾರಿಯನ್ನು ಶೀಘ್ರವಏ ಪೂರ್ಣಗೊಳಿಸಬೇಕು. ಜಿಲ್ಲಾ ಕೇಂದ್ರವನ್ನು ಸುಂದರ ಮತ್ತು ಧೂಳು ಮುಕ್ತ ನಗರವಾಗಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆಶಿಸಿದರು.

‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ನಗರದೊಳಗಿನ ಹಾಗೂ ಹೊರ ಭಾಗದ ಕೊಳವೆ ಬಾವಿಗಳು ಮರಪೂರಣವಾಗುತ್ತಿವೆ. ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ರಾಜಕಾರಣ ಚುನಾವಣೆಗೆ ಸೀಮಿತವಾಗಬೇಕು’ ಎಂದು ಹೇಳಿದರು.

ನಗರಸಭೆ ಸದಸ್ಯರು, ಆಯುಕ್ತ ಶ್ರೀಕಾಂತ್ ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.