ADVERTISEMENT

ರಸ್ತೆ ಅಪಘಾತ: ಕೋಲಾರದಲ್ಲಿ 3 ವರ್ಷಗಳಲ್ಲಿ 1,272 ಪ್ರಾಣಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 8:22 IST
Last Updated 23 ಡಿಸೆಂಬರ್ 2025, 8:22 IST
ಕೋಲಾರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು
ಕೋಲಾರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು   

ಕೋಲಾರ: ಜಿಲ್ಲೆಯಲ್ಲಿ 2023 ರಿಂದ 2025ರ ಅವಧಿಯಲ್ಲಿ ಒಟ್ಟು 4,173 ರಸ್ತೆ ಅಪಘಾತಗಳು ಸಂಭವಿಸಿದ್ದು, 1,272 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ-75 ಅತ್ಯಂತ ಅಪಾಯಕಾರಿ ರಸ್ತೆಯಾಗಿ ಗುರುತಿಸಿದ್ದು, 204 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಹೇಳಿದರು.

ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದರ ಅವರು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮತ್ತು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮಂಡಿಸಲಾದ ಐ-ರಾಡ್ (I-RAD) ವರದಿಯಲ್ಲಿರುವಂತೆ ಜಿಲ್ಲೆಯ ರಸ್ತೆ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿದರು.

ADVERTISEMENT

ರಾಷ್ಟ್ರೀಯ ಹೆದ್ದಾರಿ–75ರಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಸಭೆಯಲ್ಲಿ ಕಾಲಮಿತಿ ನಿಗದಿಪಡಿಸಿದ ಅವರು, ಬೆಳ್ಳೂರು ಬಳಿ ಮೇಲ್ಸೇತುವೆ ಮತ್ತು ನರಸಾಪುರ ಕೈಗಾರಿಕಾ ಪ್ರದೇಶದ ವಿಯುಪಿ ಕಾಮಗಾರಿಯನ್ನು ವರ್ಷಾಂತ್ಯದಲ್ಲಿ ಪೂರ್ಣಗೊಳಿಸಬೇಕು. ನರಸಾಪುರ ಮೇಲ್ಸೇತುವೆ ಮತ್ತು ನಂಗಲಿ ಕ್ರಾಸ್ ಎಲ್‌ವಿಯುಪಿಯನ್ನು ಮುಂದಿನ ಜನವರಿಯೊಳಗೆ ಪೂರ್ಣಗೊಳಿಸಬೇಕು. ವಡಗೂರು, ತಂಬಹಳ್ಳಿ, ನರಸಿಂಹತೀರ್ಥ ಮತ್ತು ವಡ್ಡಹಳ್ಳಿಯ ಕಾಮಗಾರಿಗಳು ಫೆಬ್ರುವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಬೇಕು ಎಂದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‍ವೇನಲ್ಲಿ ವೇಗ ನಿಯಂತ್ರಣಕ್ಕಾಗಿ ಸ್ಪೀಡ್ ಕ್ಯಾಮೆರಾ ಅಳವಡಿಸಲಾಗಿದೆ. ಭಾರಿ ವಾಹನಗಳಾದ ಲಾರಿ, ಟ್ರಕ್‍ಗಳು ನಿಗದಿತ ಸಮಯದಲ್ಲಿ ಸಂಚಾರ ನಡೆಸಬೇಕು. ನಿಯಮ ಉಲ್ಲಂಘಿಸಿದರು ದಂಡ ವಿಧಿಸಿ ಸಂಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ದ್ವಿಚಕ್ರ ವಾಹನಗಳ ಸಂಚಾರ ಕಂಡುಬರುತ್ತಿದೆ. ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಬೇಕು ಎಂದು ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ 1,056 ಕಿ.ಮೀ ಉದ್ದದ ರಸ್ತೆಗಳಲ್ಲಿ ಮಾರ್ಕಿಂಗ್‌, ಬ್ಲಿಂಕರ್ಸ್ ಮತ್ತು ರಸ್ತೆ ಸುರಕ್ಷತಾ ಫಲಕಗಳನ್ನು ಅಳವಡಿಸಲು ₹ 2.10 ಕೋಟಿ ಯೋಜನೆಗೆ ಅನುಮೋದನೆ ನೀಡಲಾಯಿತು.

ಶಾಲಾ ಮಕ್ಕಳು ಮತ್ತು ಆಟೋ, ಲಾರಿ ಚಾಲಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಯಿತು.

ಸಭೆಯಲ್ಲಿ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಕೋಲಾರ ಹೆಚ್ಚುವರಿ ಪೊ‌ಲೀಸ್ ವರಿಷ್ಠಾಧಿಕಾರಿ ಜಗದೀಶ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಮೂರ್ತಿ, ಕೋಲಾರ ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿ ಶ್ರೀನಾಥ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲರೆಡ್ಡಿ, ರಾಷ್ಟ್ರೀಯ ಹೆದ್ದಾರಿ 75 ಹಾಗೂ 69ರ ಪ್ರಾಧಿಕಾರದ ಅಧಿಕಾರಿಗಳು, ಕೆ–ಶಿಪ್, ನಗರಸಭೆ ಅಧಿಕಾರಿಗಳು ಇದ್ದರು.

ಅಪಘಾತ; ₹ 1 ಲಕ್ಷವರೆಗೆ ಉಚಿತ ಚಿಕಿತ್ಸೆ

ರಾಜ್ಯ ಸರ್ಕಾರದ ಅಪಘಾತ ಚಿಕಿತ್ಸಾ ಯೋಜನೆಯಡಿ ಪ್ರತಿ ಸಂತ್ರಸ್ತರಿಗೆ ಗರಿಷ್ಠ ₹ 1 ಲಕ್ಷ ವೆಚ್ಚದವರೆಗೆ ಮೊದಲ 48 ಗಂಟೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಅವಕಾಶವಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಂ.ಆರ್.ರವಿ ಹೇಳಿದರು. ಅಪಘಾತಕ್ಕೀಡಾದವರಿಗೆ ತಕ್ಷಣದ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ 20 ಆ್ಯಂಬುಲೆನ್ಸ್‌ಗಳು ಹಾಗೂ ವಿವಿಧ ಆರೋಗ್ಯ ಕೇಂದ್ರಗಳಲ್ಲಿ 26 ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದರು.

ಹೆದ್ದಾರಿಯ ಏಳು ಕಡೆ ಬ್ಲಾಕ್‌ ಸ್ಪಾಟ್‌

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಮರುಕಳಿಸುತ್ತಿರುವ 7 ಪ್ರಮುಖ ಸ್ಥಳಗಳನ್ನು 'ಬ್ಲ್ಯಾಕ್‌ ಸ್ಪಾಟ್ಸ್‌’ ಎಂದು ಗುರುತಿಸಲಾಗಿದೆ. ಇಲ್ಲೂ ಅಪಘಾತ ಪ್ರಕರಣ ತಡೆಯಲು ಸೂಕ್ತ ಯೋಜನೆ ರೂಪಿಸಬೇಕು ಎಂದು ಎಂ.ಆರ್.ರವಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದರು. ಅರಬ್ಬಿಕೊತ್ತನೂರು ಚುಂಚದೇನಹಳ್ಳಿ ಮಡೇರಹಳ್ಳಿ ಕಾಳಹಸ್ತಿಪುರ ಅಜ್ಜಪ್ಪನಹಳ್ಳಿ ಕಾಂತರಾಜ್ ಸರ್ಕಲ್ ಮತ್ತು ಕಪ್ಪಲಮಡಗು ಈ ಸ್ಥಳಗಳಲ್ಲಿ ತಕ್ಷಣವೇ ಎಂಜಿನಿಯರಿಂಗ್ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.