ADVERTISEMENT

ಶಾಸನ ಸಭೆಯಲ್ಲಿ ದಲಿತಪರ ಧ್ವನಿ ಕ್ಷೀಣ

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಳವಳ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 14:48 IST
Last Updated 24 ಆಗಸ್ಟ್ 2019, 14:48 IST
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಗೆ ಕೋಲಾರದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಗೆ ಕೋಲಾರದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.   

ಕೋಲಾರ: ‘ಕ್ಯಾನ್ಸರ್‌ನಂತೆ ಇಡೀ ಸಮಾಜವನ್ನು ಆವರಿಸಿಕೊಂಡಿರುವ ಅಸ್ಪೃಶ್ಯತೆಯ ರೋಗಕ್ಕೆ ಚಿಕಿತ್ಸೆ ಕೊಡಬೇಕಾದ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ದಲಿತಪರ ಧ್ವನಿ ಕ್ಷೀಣಿಸಿದೆ’ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಳವಳ ವ್ಯಕ್ತಪಡಿಸಿದರು.

ನಗರದ ಹೊರವಲಯದ ತೇರಹಳ್ಳಿ ಬೆಟ್ಟದಲ್ಲಿನ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಿಗೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷವಾದರೂ ಅಸ್ಪೃಶ್ಯತೆಯ ಬೇರು ಇಂದಿಗೂ ಜೀವಂತವಾಗಿದೆ. ಈ ಸಾಮಾಜಿಕ ಪಿಡುಗಿನ ನಿರ್ಮೂಲನೆಗೆ ಇನ್ನಾದರೂ ಎಚ್ಚರ ವಹಿಸದಿದ್ದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ. ಬಿ.ಬಸವಲಿಂಗಪ್ಪರ ನಂತರ ಶಾಸನ ಸಭೆಯಲ್ಲಿ ದಲಿತರ ಪರ ಮಾತನಾಡುವ ಧ್ವನಿಯೇ ಇಲ್ಲವಾಗಿದೆ. ಈಗಿನ ದಲಿತ ಜನಪ್ರತಿನಿಧಿಗಳು ಶಾಸನ ಸಭೆಯಲ್ಲಿ ಮಾತನಾಡದ ಸ್ಥಿತಿಗೆ ತಲುಪಿದ್ದಾರೆ’ ಎಂದು ವಿಷಾದಿಸಿದರು.

ADVERTISEMENT

‘ದಲಿತ ಚಳವಳಿ ಪವಿತ್ರವಾದದ್ದು, ಅದನ್ನು ತಾಯಿಯಂತೆ ಕಾಣಬೇಕು. ಪ್ರೀತಿಯಿಂದ ಎಲ್ಲರ ಮನಸ್ಸು ಗೆಲ್ಲಬೇಕು. ಸಾಮಾಜಿಕ ಬದಲಾವಣೆಗೆ ತುಡಿಯುವ ಮನಸ್ಸುಗಳನ್ನು ಗುರುತಿಸಬೇಕು. ಸಮಾಜದ ಬದಲಾವಣೆ ಸಾಧ್ಯವಾದರೆ ಅದೇ ನಿಜವಾದ ಚಳವಳಿ. ಅಂಬೇಡ್ಕರ್ ತಮಗಾದ ಅವಮಾನವನ್ನೇ ಸಾಧನೆಯ ಮೆಟ್ಟಿಲಾಗಿಸಿಕೊಂಡರು’ ಎಂದು ಸ್ಮರಿಸಿದರು.

ಬೆದರಿಕೆಯ ತಂತ್ರ: ‘ಈಗಿನ ದಲಿತ ಹೋರಾಟಗಳು ಬೆದರಿಕೆಯ ತಂತ್ರಗಳಾಗಿವೆ. ಲೆಟರ್ ಹೆಡ್ ಸಂಸ್ಕೃತಿ ಕೊನೆಯಾಗಬೇಕು. ದಲಿತ ಸಂಘಟನೆಗಳು ದಲಿತರಿಗೆ ದೇವಸ್ಥಾನ ಪ್ರವೇಶ ಮಾಡಿಸಬೇಕೆಂಬ ಹೋರಾಟಕ್ಕೆ ಸೀಮಿತವಾಗಬಾರದು. ದಲಿತರು ಗ್ರಾಮ ಪಂಚಾಯಿತಿಯಿಂದ ಶಾಸನ ಸಭೆವರೆಗಿನ ಆಡಳಿತ ಶಕ್ತಿಯಾಗಿ ಹೊರಹೊಮ್ಮಲು ಒತ್ತಾಸೆಯಾಗಿ ನಿಲ್ಲಬೇಕು. ಶಾಸನಸಭೆಗಳು ಮಾತ್ರ ದಲಿತರ ಶಾಪ ವಿಮೋಚನೆಗೆ ದಾರಿ ತೋರಬಲ್ಲವು’ ಎಂದು ಅಭಿಪ್ರಾಯಪಟ್ಟರು.

‘ಚಳವಳಿ ನಾಯಕರ ಎದೆಯಲ್ಲಿ ಧೈರ್ಯವಿದ್ದರೆ ಏನೂ ಬೇಕಾದರೂ ಸಾಧಿಸಬಹುದು. ಆದರೆ, ನಮ್ಮೊಳಗೆ ಅಂಬೇಡ್ಕರ್ ಚಿಂತನೆ ಚಿಗುರಬೇಕು. ಇಡೀ ಜಗತ್ತಿಗೆ ಆದರ್ಶವಾಗಿರುವ ಅಂಬೇಡ್ಕರ್‌ರ ವಿಚಾರಧಾರೆಯು ಮುಂದಿನ ಪೀಳಿಗೆಯ ಆದರ್ಶವಾಗಬೇಕು’ ಎಂದು ಕಿವಿಮಾತು ಹೇಳಿದರು.

ಚಳವಳಿ ಛಿದ್ರ: ‘40 ವರ್ಷಗಳ ಸುದೀರ್ಘ ದಲಿತ ಚಳವಳಿ ಇತಿಹಾಸದಲ್ಲಿ ರಾಜ್ಯದೆಲ್ಲೆಡೆ ನಡೆದ ಬಹುತೇಕ ಹೋರಾಟಗಳು ಎಂಜಿನಿಯರ್‌ಗಳ ಬಡ್ತಿಗೆ ಸೀಮಿತವಾದ ಕಾರಣಕ್ಕೆ ಚಳವಳಿ ಛಿದ್ರವಾಗಿದೆ. ಪ್ರೊ.ಬಿ.ಕೃಷ್ಣಪ್ಪ ನವರ ದೂರದೃಷ್ಠಿಯ ಕಾರಣ ಇಂದಿಗೂ ಕಾರ್ಯಕರ್ತರ ಹಂತದಲ್ಲಿ ಚಳವಳಿ ಉಳಿದಿದೆ. ಕಾರ್ಯಕರ್ತರು ಹಾಗೂ ಮುಖಂಡರು ಅಧ್ಯಯನ ಶಿಬಿರದ ಮೂಲಕ ಜ್ಞಾನ ವೃದ್ಧಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಶ್ರೀನಿವಾಸ್ ಸಲಹೆ ನೀಡಿದರು.

ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ್, ಪದಾಧಿಕಾರಿಗಳಾದ ಎಸ್.ಎನ್.ಮಲ್ಲಪ್ಪ, ವಿಜಯನರಸಿಂಹ, ಎಸ್.ವಿಘ್ನೇಶ್, ಜೆ.ಶ್ರೀನಿವಾಸಲು, ಮುನಿಯಪ್ಪ, ಮುನಿಚೌಡಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.